ಆಂಧ್ರಪ್ರದೇಶ: "ವಿಜಯವಾಡದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಮಹಿಳೆಯೊಬ್ಬರಿಗೆ ಶಾಪವಾಗಿ ಪರಿಣಮಿಸಿದೆ. ಹಾವು ಕಚ್ಚಿ ಆಸ್ಪತ್ರೆಗೆ ಬಂದಾಗ ಚಿಕಿತ್ಸೆ ನೀಡಿದ ವೈದ್ಯರು ಸರ್ಜಿಕಲ್ ಬ್ಲೇಡ್ ಇಟ್ಟು ಕೈಗೆ ಬ್ಯಾಂಡೇಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಸಂತ್ರಸ್ತೆಯ ಕೈಗೆ ಗಂಭೀರ ಸೋಂಕು ತಗುಲಿದೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳೆ ಸ್ಥಿತಿ ಚಿಂತಾಜನಕವಾಗಿದೆ" ಎಂದು ಸಂಬಂಧಿಕರು ದೂರಿದ್ದಾರೆ.
ಪ್ರಕರಣದ ವಿವರ:ಕೃಷ್ಣಾ ಜಿಲ್ಲೆ ವಿಸ್ಸನ್ನ ಪೇಟೆಯ ತುಳಸಿ ಎಂಬ ಮಹಿಳೆಗೆ ಕಳೆದ ಮಾ.28ರಂದು ಮನೆಯಲ್ಲಿ ಹಾಸಿಗೆಯ ಕೆಳಗೆ ವಸ್ತುಗಳನ್ನು ಜೋಡಿಸುತ್ತಿದ್ದಾಗ ಕೈಗೆ ಹಾವು ಕಚ್ಚಿತ್ತು. ತಕ್ಷಣ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ರೋಗ ನಿರೋಧಕ ಚುಚ್ಚುಮದ್ದು ಪಡೆದಿದ್ದರು. ಆದರೆ ಅವರ ಕೈ ಕಪ್ಪು ಬಣ್ಣಕ್ಕೆ ತಿರುಗಿದ್ದು, ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದರು. ಆ ಬಳಿಕ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಮನೆಗೆ ತೆರಳಿದ ಬಳಿಕವೂ ಕೈ ಊತ ಕಡಿಮೆಯಾಗಿರಲಿಲ್ಲ. ಸಂತ್ರಸ್ತೆ ನೋವಿನಿಂದ ಬಳಲುತ್ತಿದ್ದರಿಂದ ಸಂಬಂಧಿಕರು ಮತ್ತೆ ವೈದ್ಯರ ಗಮನಕ್ಕೆ ತಂದಿದ್ದರು. ಮತ್ತೊಮ್ಮೆ ಪರೀಕ್ಷಿಸಿದ ವೈದ್ಯರು ಕೈಗೆ ಆಪರೇಷನ್ ಮಾಡಿ ಊದಿಕೊಂಡಿದ್ದ ಭಾಗವನ್ನು ತೆಗೆದಿದ್ದರು. ನಂತರ ಅವರ ಮೊಣಕೈವರೆಗೆ ಬ್ಯಾಂಡೇಜ್ ಮಾಡಿ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಎರಡು ದಿನಗಳ ನಂತರ ಡ್ರೆಸ್ಸಿಂಗ್‌ಗಾಗಿ ಬ್ಯಾಂಡೇಜ್ ಬಿಚ್ಚುತ್ತಿದ್ದಾಗ ಅದರೊಳಗೆ ಬ್ಲೇಡ್ ಕಾಣಿಸಿತ್ತು ಎಂಬುದು ಸಂಬಂಧಿಕರ ದೂರಾಗಿದೆ.