ಉದಯಪುರ: ಧಾರ್ಮಿಕ ಮತಾಂಧರಿಂದ ಕೊಲೆಗೀಡಾದ ಇಲ್ಲಿನ ಟೇಲರ್ ಕನ್ಹಯ್ಯಾಲಾಲ್ ಶವದ ಪೋಸ್ಟ್ ಮಾರ್ಟಂ ಎಂಬಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಪ್ರಕರಣದ ಗಂಭೀರತೆಯನ್ನು ಅರಿತು ಶವಾಗಾರದ ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೋಸ್ಟ್ಮಾರ್ಟಂ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಪಾರ್ಥಿವ ಶರೀರವನ್ನು ಅವರ ಸ್ವಂತ ಊರಿಗೆ ರವಾನಿಸಲಾಗಿದ್ದು, ಅಲ್ಲಿಗೆ ಆಗಲೇ ತಲುಪಿದೆ.
ಕನ್ಹಯ್ಯಾಲಾಲ್ ಅವರನ್ನು ಅವರ ಅಂಗಡಿಯಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಸದ್ಯ ಎನ್ಐಎ ಹಾಗೂ ಎಸ್ಐಟಿ ತಂಡಗಳು ಪ್ರಕರಣದ ತೀವ್ರ ತನಿಖೆ ನಡೆಸುತ್ತಿವೆ. ಇಬ್ಬರು ಕೊಲೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಪ್ರದೇಶದಲ್ಲಿ ಭಾರಿ ಆತಂಕದ ವಾತಾವರಣವಿದ್ದು, ಸಂಪೂರ್ಣ ರಾಜಸ್ಥಾನದಲ್ಲಿ ಇಂಟರನೆಟ್ ಬಂದ್ ಮಾಡಲಾಗಿದೆ ಹಾಗೂ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಪ್ರಕರಣದ ಹಿಂದಿನ ಸಂಚನ್ನು ಬಯಲಿಗೆಳೆಯುವೆ ಎಂದ ಬಿಜೆಪಿ ನಾಯಕ ಕಟಾರಿಯಾ: ಬಿಜೆಪಿ ಮುಖಂಡ ಗುಲಾಬ್ ಚಂದ್ ಕಟಾರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ರಾಜಸ್ಥಾನದಲ್ಲಿ ಇದು ಇಂತಹ 5ನೇ ಘಟನೆಯಾಗಿದೆ. ಒಂದು ರೀತಿಯಲ್ಲಿ ಕೊಲೆಗಳ ಸರಣಿ ನಡೆಯುತ್ತಿದೆ ಎಂದು ಅವರು ಹೇಳಿದರು.