ಕುಲ್ಗಾಂ(ಜಮ್ಮು ಕಾಶ್ಮೀರ): ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನಿ ಉಗ್ರ ಸೇರಿದಂತೆ ಮೂವರು ಜೈಶ್ ಎ ಮೊಹಮ್ಮದ್ (ಜೆಇಎಂ) ಸಂಘಟನೆಯ ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ.
ಕುಲ್ಗಾಂನ ಅಹ್ವಾಟೂ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಕುರಿತು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಗುಪ್ತಚರ ಮಾಹಿತಿ ದೊರಕಿತ್ತು. ಈ ಪ್ರದೇಶದಲ್ಲಿ ಸೈನಿಕರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಜಂಟಿಯಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು.
ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಜಂಟಿ ಶೋಧ ತಂಡವು ಉಗ್ರರಿರುವ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಅಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇದು ಎನ್‌ಕೌಂಟರ್‌ಗೆ ಕಾರಣವಾಯಿತು. ಎನ್‌ಕೌಂಟರ್‌ನಲ್ಲಿ ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಅವರನ್ನು ಬಟ್‌ಪೋರಾದ ಮೊಹಮ್ಮದ್ ಶಫಿ ಘನಿ ಮತ್ತು ಟಕಿಯಾ ಗೋಪಾಲ್‌ಪೋರಾದ ಮೊಹಮ್ಮದ್ ಆಸಿಫ್ ವಾನಿ ಅಲಿಯಾಸ್ ಯವರ್ ಎಂದು ಗುರುತಿಸಲಾಗಿದೆ.