ಛಾಪ್ರಾ(ಬಿಹಾರ): ಬಿಹಾರದಲ್ಲಿ ಮದ್ಯ ನಿಷೇಧವಿದ್ದರೂ ನಕಲಿ ಮದ್ಯದ ಹಾವಳಿ ಜೋರಾಗಿದೆ. ಇದೀಗ ಸರಾನ್ ಜಿಲ್ಲೆಯ ಛಾಪ್ರಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆ ಆಗಿದೆ. ವಿಷಪೂರಿತ ಮದ್ಯ ಸೇವಿಸಿ ಮೃತಪಟ್ಟಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. ಸಂಜಯ್ ಸಿಂಗ್, ಕುನಾಲ್ ಕುಮಾರ್ ಸಿಂಗ್, ಅಮಿತ್ ರಂಜನ್, ಹರೇಂದ್ರ ರಾಮ್ ಸೇರಿ 20 ಮಂದಿ ಮೃತ ಪಟ್ಟಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಛಾಪ್ರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳವಾರದಂದು 20 ಜನ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ವಿಷಪೂರಿತ ಮದ್ಯ ಸೇವಿಸಿದ ಪರಿಣಾಮ ಅವರು ಮೃತ ಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪಿರುವ ಬಗ್ಗೆ ಜಿಲ್ಲಾಡಳಿತ ದೃಢಪಡಿಸಿಲ್ಲ.
ಘಟನೆ ಕುರಿತು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಸಾವಿಗೆ ಕಾರಣ ತಿಳಿಯಲಿದೆ. ಸರನ್ ಜಿಲ್ಲೆಯಲ್ಲಿ ಇದೇ ಮೊದಲಲ್ಲ ಈ ಹಿಂದೆಯೂ ನಕಲಿ ಮದ್ಯ ಸೇವಿಸಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದು, ಸರ್ಕಾರಕ್ಕೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಪೊಲೀಸರು ಹೇಳುವುದೇನು?: ಘಟನೆ ಬಗ್ಗೆ ಮಾತನಾಡಿರುವ ಬಿಹಾರ ಪೊಲೀಸ್ ಪ್ರಧಾನ ಕಚೇರಿಯ ಎಡಿಜಿ ಜಿತೇಂದ್ರ ಸಿಂಗ್ ಗಂಗ್ವಾರ್, ಸರನ್ ಜಿಲ್ಲೆಯಲ್ಲಿ ಇದುವರೆಗೆ ನಕಲಿ ಮದ್ಯದಿಂದ 6 ಸಾವುಗಳು ದೃಢಪಟ್ಟಿವೆ. ಈ ಸಂಬಂಧ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣ ಎನ್ನಲಾದ ಮೂವರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ದಾಳಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ವೈದ್ಯರು ಹೇಳುವುದಿಷ್ಟು:ಈ ಘಟನೆ ಬಗ್ಗೆ ಮಾತನಾಡಿರುವ ಸರನ್ನ ಸಿವಿಲ್ ಸರ್ಜನ್ ಸಾಗರ್ ದುಲಾಲ್, ಮದ್ಯ ಸೇವನೆಯಿಂದ ಈ ಜನರ ಆರೋಗ್ಯ ಹದಗೆಟ್ಟಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಎಷ್ಟು ಜನ ಮೃತಪಟ್ಟಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಸಾವು ಹೇಗೆ ಸಂಭವಿಸಿದೆ ಎಂಬುದು ಪೋಸ್ಟ್‌ಮಾರ್ಟಂ ವರದಿ ಮತ್ತು ಪರೀಕ್ಷೆಯ ಬಳಿಕವೇ ಸ್ಪಷ್ಟವಾಗಲಿದೆ. ಗ್ರಾಮದಲ್ಲಿ ಅನೇಕರು ಅಸ್ವಸ್ಥರಾಗಿದ್ದಾರೆ.
ನಮ್ಮ ತಂಡ ದುರ್ಘಟನೆ ನಡೆದ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಚಿಕಿತ್ಸೆಯಲ್ಲಿ ವಿಳಂಬವಾದರೆ, ರೋಗಿಗಳನ್ನು ಉಳಿಸುವುದು ಹೆಚ್ಚು ಕಷ್ಟಕರವಾಗಲಿದೆ. ಪರಿಸ್ಥಿತಿ ತೀರಾ ಹದಗೆಟ್ಟಾಗ ಜನರು ರೋಗಿಗಳನ್ನು ತಮ್ಮ ಮನೆಯಿಂದ ಹೊರಗೆ ಕರೆತರುತ್ತಿದ್ದಾರೆ. ಸಂತ್ರಸ್ತರ ಕುಟುಂಬಗಳು ಅಥವಾ ಗ್ರಾಮಸ್ಥರು ಈ ಕೆಲಸದಲ್ಲಿ ಸಹಾಯ ಮಾಡುತ್ತಿಲ್ಲ ಎಂದು ಸರನ್ ಆಸ್ಪತ್ರೆಯ ಸರ್ಜನ್ ಸಾಗರ್ ದುಲಾಲ್ ಸಿನ್ಹಾ ಹೇಳಿದ್ದಾರೆ.
ಇದನ್ನೂ ಓದಿ:ನಕಲಿ ಮದ್ಯ ಸೇವಿಸಿ ಮೂವರ ಸಾವು: ಅಂಗಡಿ ಮಾಲೀಕ ಪರಾರಿ