ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ವಿಷಯದ ಕುರಿತು ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಲಿದೆ. ಈ ಹಿನ್ನೆಲೆ ಕಾಶ್ಮೀರದಲ್ಲಿ ಅಧಿಕಾರಿಗಳು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಈಗಾಗಲೇ ಪೊಲೀಸರು ಕೆಲವು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಇತರರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಎರಡು ವಾರಗಳ ಕಾಲ ಪೊಲೀಸರು ಕಾಶ್ಮೀರ ಕಣಿವೆಯ 10 ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಜನರನ್ನು ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಯಾರೂ ರಾಜಕೀಯಗೊಳಿಸಬಾರದು ಮತ್ತು ಎಲ್ಲರೂ ಗೌರವಿಸಬೇಕು ಎಂದು ಬಿಜೆಪಿ ಸಲಹೆ ನೀಡಿದೆ. 370 ರದ್ದತಿಯ ಪರವಾಗಿ ತೀರ್ಪು ಬಂದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಉಂಟು ಮಾಡುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಓಮರ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ. ಅಂತಹ ಪರಿಸ್ಥಿತಿ ಎದುರಾದರೆ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸುತ್ತದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಭರವಸೆ ವ್ಯಕ್ತಪಡಿಸಿದ್ದಾರೆ. ಎನ್‌ಸಿ ಮತ್ತು ಪಿಡಿಪಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್‌ನಲ್ಲಿ (ಪಿಎಜಿಡಿ) ಪಾಲುದಾರ ಪಕ್ಷಗಳಾಗಿವೆ. ಆರ್ಟಿಕಲ್ 370 ರದ್ದತಿ ವಿರುದ್ಧ ಹೋರಾಡಲು ಜಮ್ಮು ಮತ್ತು ಕಾಶ್ಮೀರದ ಪಕ್ಷಗಳು ಗುಪ್ಕರ್ ಒಕ್ಕೂಟವನ್ನು ರಚಿಸಿಕೊಂಡಿದ್ದವು. ಜನರ ಆಶೋತ್ತರಗಳಿಗೆ ಅನುಗುಣವಾಗಿ ತೀರ್ಪು ಬರಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಪ್ರತಿಕ್ರಿಯಿಸಿದ್ದಾರೆ.
ಆಗಸ್ಟ್ 5, 2019 ರಂದು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ಕೇಂದ್ರವು ರದ್ದುಗೊಳಿಸಿತು. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಈ ತೀರ್ಪಿನ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಹಲವು ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಸೇರಿದಂತೆ ಐವರು ಸದಸ್ಯರ ಸಾಂವಿಧಾನಿಕ ಪೀಠವು ಈ ವರ್ಷದ ಆಗಸ್ಟ್ 2 ರಿಂದ ಅರ್ಜಿಗಳ ಮೇಲೆ ಸುದೀರ್ಘ ತನಿಖೆ ನಡೆಸಿತು. ಸೆಪ್ಟೆಂಬರ್ 5ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಸೋಮವಾರದಂದು ಅಂದ್ರೆ ಇಂದು ಈ ಪ್ರಕರಣದ ತೀರ್ಪನ್ನು ನೀಡುವುದಾಗಿ ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಓದಿ:ಆರ್ಟಿಕಲ್ 370 ರದ್ದತಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ : ಸುಪ್ರೀಂನಲ್ಲಿ ಮಹತ್ವದ ತೀರ್ಪು