ಕರ್ನಾಟಕ

karnataka

ETV Bharat / bharat

ಸೋನಿಯಾ, ರಾಹುಲ್​ ಗಾಂಧಿ ಜೈಲು ಸೇರೋದು ಪಕ್ಕಾ: ಸುಬ್ರಮಣಿಯನ್ ಸ್ವಾಮಿ - ನ್ಯಾಷನಲ್​ ಹೆರಾಲ್ಡ್ ಹಗರಣ ಬಗ್ಗೆ ಸ್ವಾಮಿ ಸಂದರ್ಶನ

ಗಾಂಧಿ ಕುಟುಂಬಕ್ಕೆ ಹುರುಳಾಗಿರುವ "ನ್ಯಾಷನಲ್​ ಹೆರಾಲ್ಡ್​ ಹಗರಣ"ದ ಮೂಲಪುರುಷ, ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್​ ಸ್ವಾಮಿ ಹಗರಣದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಗಾಂಧಿಗಳಿಗೆ ಶಿಕ್ಷೆಯಾವುದು ಖಂಡಿತ ಎಂದು ಭವಿಷ್ಯ ನುಡಿದಿದ್ದಾರೆ.

Subramanian Swamy
ಸುಬ್ರಮಣಿಯನ್ ಸ್ವಾಮಿ

By

Published : Aug 6, 2022, 7:47 AM IST

ನವದೆಹಲಿ:ನ್ಯಾಷನಲ್​ ಹೆರಾಲ್ಡ್ ಪತ್ರಿಕೆಯಲ್ಲಿ 2 ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿ ದೂರು ಸಲ್ಲಿಸಿ, ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂದಿ ಮತ್ತು ನಾಯಕ ರಾಹುಲ್​ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುವುದಕ್ಕೆ ಕಾರಣೀಭೂತರಾದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಗಾಂಧಿ ಕುಟುಂಬವು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದೆ. ಇಬ್ಬರಿಗೂ ಜೈಲು ಶಿಕ್ಷೆ ಖಚಿತ ಎಂದು ಹೇಳಿದ್ದಾರೆ.

ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಗಾಂಧಿ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪದ ಹೊರಿಸಿದ ಅವರು, ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು.

ಸ್ವಾಮಿಗಳ ಮಾತಿನ ಮರ್ಮ ಸಾರದ ಇಲ್ಲಿದೆ-

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆಳ- ಅಗಲವೇನು?:2012 ರಲ್ಲಿ ಈ ಹಗರಣದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದೆ. 2013 ರಲ್ಲಿ ಈ ಸಂಬಂಧ ನ್ಯಾಯಾಲಯದ ಮೊರೆ ಹೋದೆ. ಇದರ ವಿರುದ್ಧ ಗಾಂಧಿ ಕುಟುಂಬ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಆದರೆ, ಅದು ಯಾವುದೇ ಫಲ ಕೊಡಲಿಲ್ಲ. ಪಟಿಯಾಲಾ ಕೋರ್ಟ್​ ಈ ಬಗ್ಗೆ ತನಿಖೆಗೆ ಸೂಚಿಸಿತು.

ಸ್ವಾತಂತ್ರ್ಯಪೂರ್ವ ಪತ್ರಿಕೆಯಾದ ನ್ಯಾಷನಲ್​ ಹೆರಾಲ್ಡ್​ನಲ್ಲಿ 2 ಸಾವಿರ ಕೋಟಿ ಹಗರಣ ನಡೆದ ಬಗ್ಗೆ ದಾಖಲೆ ಸಮೇತ ದೂರು ನೀಡಿದೆ. ವಿಚಾರಣೆಗೂ ಮೊದಲೇ ಗಾಂಧಿ ಕುಟುಂಬ ನಿರೀಕ್ಷಣಾ ಜಾಮೀನು ಪಡೆದಿದೆ. ವಿಚಾರಣೆಯ ವೇಳೆ ಹಲವಾರು ಅಕ್ರಮಗಳು ಹೊರಬಂದಿವೆ. ತನಿಖೆಯಲ್ಲಿ ಗಾಂಧಿ ಕುಟುಂಬ ತಪ್ಪಿತಸ್ಥರೆಂದು ಗೋಚರವಾಗಿದೆ. ಇದನ್ನು ಪ್ರಶ್ನಿಸಿದ್ದರಿಂದ ಅದೀಗ ಸುಪ್ರೀಂ ಕೋರ್ಟ್‌ನಲ್ಲಿದೆ.

ಯಾವ ಆಧಾರದಲ್ಲಿ ಅಕ್ರಮ ನಡೆದಿದೆ ಎಂಬುದು ನಿಮ್ಮ ಆರೋಪ?:ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು 'ಯಂಗ್ ಇಂಡಿಯನ್ ಲಿಮಿಟೆಡ್' ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅದಕ್ಕೆ ಹೂಡಿದ ಬಂಡವಾಳ ಕೇವಲ 5 ಲಕ್ಷ ರೂಪಾಯಿ. ಆ ಸಂಸ್ಥೆಯು ಕಾಂಗ್ರೆಸ್‌ಗೆ 50 ಲಕ್ಷ ರೂಪಾಯಿ ಸಾಲವನ್ನು ನೀಡಿತ್ತು. ಆ ಸಾಲದ ಮೊತ್ತದ ಆಧಾರದ ಮೇಲೆ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ನ ಜವಾಬ್ದಾರಿಗಳನ್ನು ಯಂಗ್ ಇಂಡಿಯನ್ ಲಿಮಿಟೆಡ್‌ಗೆ ವರ್ಗಾಯಿಸಲಾಗಿದೆ.

ಕೇವಲ 50 ಲಕ್ಷ ರೂಪಾಯಿ ಆಫರ್ ನೀಡಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಕ್ಕುಸ್ವಾಮ್ಯವನ್ನು ಗಾಂಧಿ ಕುಟುಂಬದ ಯಂಗ್​ ಇಂಡಿಯಾ ಕಂಪನಿ ಪಡೆದಿದೆ. ಇದು ದೊಡ್ಡ ಹಗರಣಕ್ಕೆ ಕಾರಣವಾಗಿದೆ. ಆ ಕಂಪನಿಯ ಅಂದಿನ ಮೌಲ್ಯವೇ ಕಟ್ಟಡ ಮತ್ತಿತರ ಆಸ್ತಿ ಸೇರಿದಂತೆ ಸುಮಾರು 5,000 ಕೋಟಿ ರೂಪಾಯಿ ಆಗಿತ್ತು. ಅದನ್ನು ಕೇವಲ 50 ಲಕ್ಷಕ್ಕೆ ಪಡೆದಿರುವುದು ಹಗರಣವಲ್ಲವೇ.

ನಿಮ್ಮ ಆರೋಪದಿಂದ ಬಿಜೆಪಿ ವಿರುದ್ಧ ಕಾಂಗ್ರೆಸ್​ ತಿರುಗಿಬಿದ್ದಿದ್ದು ಯಾಕೆ?:ಕಾಂಗ್ರೆಸ್​ ನಡೆ ಸರಿಯಾಗಿಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಬೇಕು ಎಂದು ನಾನೇ ಸರ್ಕಾರಕ್ಕೆ ಪತ್ರ ಬರೆದೆ. ಹವಾಲಾ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಕೋಲ್ಕತ್ತಾ ಮೂಲದ ನಕಲಿ ಸಂಸ್ಥೆಯಾದ ಡೋಟೆಕ್ಸ್‌ನಿಂದ ಯಂಗ್​ ಇಂಡಿಯಾ 1 ಕೋಟಿ ರೂಪಾಯಿ ಪಡೆದಿದೆ.

ಆ ಮೊತ್ತದಿಂದ 50 ಲಕ್ಷ ರೂಪಾಯಿಗಳನ್ನು ಅಸೋಸಿಯೇಟೆಡ್ ಜರ್ನಲ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಬಳಸಿಕೊಳ್ಳಲಾಗಿದೆ. ಇದರ ವಿರುದ್ಧ ತನಿಖೆಗೂ ಪತ್ರ ಬರೆದೆ. ಕಾಂಗ್ರೆಸ್​ ಪಾರದರ್ಶಕ ತನಿಖೆಗೆ ಒಳಗಾಗದೇ ಪ್ರತಿಭಟನೆ ನಡೆಸಿದ ರಾದ್ಧಾಂತ ಮಾಡುತ್ತಿದೆ ಎಂದು ಟೀಕಿಸಿದರು.

ಹವಾಲಾ ದಂಧೆಕೋರರೊಂದಿಗೆ ಕಾಂಗ್ರೆಸ್ ನಾಯಕರ ನಂಟಿದೆಯಾ?:ಖಂಡಿತವಾಗಿಯೂ ಇದೆ. ಅವರು ವಿದೇಶಿ ಬ್ಯಾಂಕ್‌ಗಳಿಂದ ಹಣವನ್ನು ಪಡೆದಿದ್ದಾರೆ. ಅದರ ಬಗ್ಗೆ ನಾನು ಸರ್ಕಾರಕ್ಕೂ ದೂರು ನೀಡಿದ್ದೇನೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಫಲಿತಾಂಶ ಏನಾಗಬಹುದು?:ಈ ಪ್ರಕರಣದಲ್ಲಿ ನನಗೆ ಲಭ್ಯವಿರುವ ಎಲ್ಲಾ ಸಂಗತಿಗಳ ಆಧಾರದ ಮೇಲೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮತ್ತಿತರರು ಖಂಡಿತವಾಗಿಯೂ ಜೈಲು ಶಿಕ್ಷೆಗೆ ಒಳಗಾಗುವುದು ಖಂಡಿತ. ಪ್ರಕರಣ ಇತ್ಯರ್ಥವಾಗುವವರೆಗೆ ಬಿಜೆಪಿ ಅಧಿಕಾರಲ್ಲಿದ್ದರೆ ಮಾತ್ರ ಸಾಧ್ಯ. ಒಂದು ವೇಳೆ ಕಾಂಗ್ರೆಸ್​ ಅಧಿಕಾರಕ್ಕೆ ಬಂದಲ್ಲಿ ಇದು ಏನು ಬೇಕಾದರೂ ಆಗಬಹುದು. ಆದರೆ, ಕಾನೂನು ಹೋರಾಟ ಮಾತ್ರ ಮುಂದುವರಿಯುತ್ತದೆ.

ರಾಷ್ಟ್ರದ ಪ್ರಸ್ತುತ ಆರ್ಥಿಕ ಸ್ಥಿತಿಯ ಬಗ್ಗೆ ನಿಮ್ಮ ನಿಲುವೇನು?:ಸರ್ಕಾರದ ಆರ್ಥಿಕ ನೀತಿಗಳು ಸಂಪೂರ್ಣವಾಗಿ ತಪ್ಪಾಗಿವೆ. ಹಣಕಾಸು ಸಚಿವರಿಗೆ ವಿಷಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮತ್ತು ಅಧಿಕಾರಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ದೇಶ ಆರ್ಥಿಕವಾಗಿ ಜರ್ಜರಿತವಾಗಿದೆ. ಈ ಬಿಕ್ಕಟ್ಟು ಯಾವುದೇ ಕ್ಷಣದಲ್ಲಿ ಸ್ಫೋಟಗೊಳ್ಳಬಹುದು. ಇದರ ಬಗ್ಗೆ ನಾನು ಪ್ರಧಾನಿಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದೇ ಎಂದು ಸ್ವಾಮಿ ಹೇಳಿದರು.

ಓದಿ:ವಿದ್ಯುತ್ ಸ್ಪರ್ಶಕ್ಕೆ ಬಲಿ: 3 ಪ್ರತ್ಯೇಕ ಪ್ರಕರಣಗಳಲ್ಲಿ ₹ 1.28 ಕೋಟಿ ಪರಿಹಾರ ಪಾವತಿಗೆ ಹೈಕೋರ್ಟ್ ಆದೇಶ

ABOUT THE AUTHOR

...view details