ದರ್ಭಾಂಗ (ಬಿಹಾರ): ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ ಬಿಎ ಪದವಿ ಫಲಿತಾಂಶ ನೋಡಿ ಅಲ್ಲಿನ ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ವಿದ್ಯಾರ್ಥಿಯೋರ್ವ ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ 100ಕ್ಕೆ 151 ಅಂಕ ಗಳಿಸಿದ್ದು, ಇನ್ನೋರ್ವ ಬಿಕಾಂ ವಿದ್ಯಾರ್ಥಿಗೆ ಅಕೌಂಟಿಂಗ್ ಆ್ಯಂಡ್ ಫೈನಾನ್ಸ್ ವಿಷಯದಲ್ಲಿ ಶೂನ್ಯ ಅಂಕ ಬಂದಿದೆ. ಫಲಿತಾಂಶ ನೋಡಿದ ವಿದ್ಯಾರ್ಥಿಗಳೇ ಶಾಕ್ ಆಗಿದ್ದಾರೆ. ಫಲಿತಾಂಶ ಪ್ರಕಟಿಸುವಲ್ಲಿ ವಿವಿಯ ಅಚಾತುರ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅನ್ಮೋಲ್ ಕುಮಾರ್ 151 ಅಂಕ ಪಡೆದಿರುವ ವಿದ್ಯಾರ್ಥಿ. ಒಟ್ಟು 420 ಅಂಕಗಳನ್ನು ಪಡೆದಿದ್ದರೂ ಅನುತ್ತೀರ್ಣನಾಗಿದ್ದಾನೆ ಎಂದು ಘೋಷಿಸಿತ್ತು. ಸೋನು ಕುಮಾರ್ ಶೂನ್ಯ ಅಂಕ ಪಡೆದರೂ ಮುಂದಿನ ತರಗತಿಗೆ ಬಡ್ತಿ ಪಡೆದಿರುವುದು ಇನ್ನೂ ಆಶ್ಚರ್ಯಕರವಾಗಿದೆ. ವಿಶ್ವವಿದ್ಯಾಲಯವು ಜೂನ್ 30 ರಂದು ಫಲಿತಾಂಶವನ್ನು ವಿವಿಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು.