ಜೈಪುರ(ರಾಜಸ್ಥಾನ):ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಅಕ್ಟೋಬರ್ 11ರಂದು ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಸಚಿವರೊಬ್ಬರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.
ಹೆಚ್ಚು ಮಹಿಳಾ ಸಿಬ್ಬಂದಿ ಇರುವ ಶಾಲೆಗಳಲ್ಲಿಯೇ ಜಗಳಗಳು ಹೆಚ್ಚಾಗಿ ನಡೆಯುತ್ತವೆ. ಇವರಿಂದ ಶಾಲೆಯ ಪ್ರಿನ್ಸಿಪಾಲ್ ಮತ್ತು ಉಳಿದ ಸಹದ್ಯೋಗಿ ಶಿಕ್ಷಕರು ಸ್ಯಾರಿಡನ್ (ತಲೆ ನೋವಿನ ಮಾತ್ರೆ) ತೆಗೆದುಕೊಳ್ಳುತ್ತಾರೆ ಎಂದು ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋತಾಸ್ರ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾಕಷ್ಟ ಟೀಕೆಗೆ ಗುರಿಯಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ವಿರೋಧ ಪಕ್ಷ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅಲ್ಕಾ ಗುರ್ಜಾರ್, ಈ ರೀತಿಯ ಮಹಿಳಾ ವಿರೋಧಿ ಹೇಳಿಕೆ ನೀಡುವುದು ಅವರ ಕೊಳಕು ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಹರಿಹಾಯ್ದಿದ್ದಾರೆ.