ನವದೆಹಲಿ :ರಾಜ್ಯಸಭಾ ಸಂಸದರ ಅಮಾನತು ಮಾಡಿದ ಕ್ರಮವನ್ನು ವಿರೋಧಿಸಿ ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ಬುಧವಾರ ಮತ್ತೆ ಒಗ್ಗಟ್ಟು ಪ್ರದರ್ಶಿಸಿವೆ. ರಾಜ್ಯಸಭೆಯಿಂದ ಹೊರನಡೆದ ಸಂಸದರು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈವರೆಗೂ ಕಾಂಗ್ರೆಸ್ನೊಡನೆ ಹಾಗೂ ಪ್ರತಿಪಕ್ಷಗಳ ಸಭೆಯಿಂದ ಅಂತರ ಕಾಪಾಡಿಕೊಂಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದೆ.
ಸಂಸದರ ಅಮಾನತು ಖಂಡಿಸಿ ಗಾಂಧಿ ಪ್ರತಿಮೆಯ ಮುಂದೆ ವಿಪಕ್ಷಗಳಿಂದಪ್ರತಿಭಟನೆ.. ಭಿತ್ತಿಫಲಕಗಳನ್ನು ಹಿಡಿದುಕೊಂಡು ಪ್ರತಿಭಟನಾ ನಿರತ ಸಂಸದರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯಸಭಾ ಸದಸ್ಯರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್, ಟಿಎಂಸಿ, ಎಸ್‌ಪಿ, ಡಿಎಂಕೆ, ಶಿವಸೇನೆ, ಟಿಆರ್‌ಎಸ್, ಎನ್‌ಸಿಪಿ, ಸಿಪಿಐ(ಎಂ), ಸಿಪಿಐ, ಆರ್‌ಜೆಡಿ, ಐಯುಎಂಎಲ್, ನ್ಯಾಷನಲ್ ಕಾನ್ಫರೆನ್ಸ್, ಎಲ್‌ಜೆಡಿ, ಆರ್‌ಎಸ್‌ಪಿ ಮತ್ತು ಕೇರಳ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರ ಅಮಾನತು ಆದೇಶ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಅಮಾನತು ಆದೇಶದ ಮೂಲಕ ಸರ್ಕಾರ ಸಂಸತ್ತಿನ ಘನತೆಯನ್ನು ಕಡಿಮೆ ಮಾಡಿದೆ ಎಂದು ಟಿಎಂಸಿಯ ಸೌಗತ ರಾಯ್ ಆಕ್ರೋಶ ವ್ಯಕ್ತಪಡಿಸಿದರು. ಅಮಾನತು ಹಿಂತೆಗೆದುಕೊಳ್ಳದಿದ್ದರೆ ಪ್ರತಿಭಟನೆ ಮುಂದುವರೆಯುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಅಯೋಧ್ಯೆ ತೀರ್ಪು ಕಾನೂನಿನ ಆಧಾರದ ಮೇಲೆ ನೀಡಲಾಗಿದೆ, ಧರ್ಮದ ಮೇಲಲ್ಲ: ರಂಜನ್ ಗೊಗೊಯ್