ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹತೆ ವಿಷಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರೆಸಿದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ದ್ವಂದ್ವ ನೀತಿಗಳನ್ನು ಹೇಗೆ ಅನುಸರಿಸಲಾಗುತ್ತದೆ ಎಂಬ ಪ್ರಶ್ನೆ ಮಾಡಲಾಗಿದೆ. ಸತ್ಯ ಮಾತನಾಡುವ ವ್ಯಕ್ತಿಗೆ ಸಂಸತ್ತಿನಲ್ಲಿ ಅವಕಾಶ ಇಲ್ಲದಂತಾಗಿದೆ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಗುಜರಾತ್ ಸಂಸದರೊಬ್ಬರಿಗೆ ಮೂರು ವರ್ಷ ಶಿಕ್ಷೆಯಾಗಿತ್ತು. ಆದರೆ, 16 ದಿನಗಳಲ್ಲೇ ಈ ಸಂಸದರ ಅನರ್ಹತೆಯನ್ನೇ ರದ್ದು ಮಾಡಿ, ಸಂಸತ್ತಿನಲ್ಲಿ ಹಾಜರಾಗಲು ಅವಕಾಶ ನೀಡಲಾಗುತ್ತದೆ. ಆದರೆ, ಸತ್ಯ ಹೇಳುವ ವ್ಯಕ್ತಿ ಸಂಸತ್ತಿಗೆ ಹಾಜರಾಗಲು ಅವಕಾಶ ನೀಡಲ್ಲ. ಮಿಂಚಿನ ವೇಗದಲ್ಲೇ ಅನರ್ಹತೆ ಮಾಡಲಾಗುತ್ತದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಭ್ರಷ್ಟರನ್ನು ಯಾರು ರಕ್ಷಿಸುತ್ತಿದ್ದಾರೆ?: ಪ್ರಧಾನಿಗೆ ಕಪಿಲ್ ಸಿಬಲ್ ತಿರುಗೇಟು
ಮುಂದುವರೆದು, ಪರಿಶಿಷ್ಟ ಜಾತಿಯ ವೈದ್ಯರ ಮೇಲೆ ಆ ಸಂಸದರು ಹಲ್ಲೆ ಮಾಡಿದ್ದರು. ಸೆಷನ್ ಕೋರ್ಟ್, ಹೈಕೋರ್ಟ್ನಲ್ಲಿ ಅವರ ಅರ್ಜಿ ವಜಾಗೊಂಡಿತ್ತು. ಸುಪ್ರೀಂಕೋರ್ಟ್ನಲ್ಲಿ ಆ ಸಂಸದರಿಗೆ ಐದು ಲಕ್ಷ ರೂಪಾಯಿ ದಂಡ ಕೂಡ ಹಾಕಲಾಗಿತ್ತು. ಇಂತಹ ವ್ಯಕ್ತಿ ಸಂಸತ್ತಿನಲ್ಲಿ ಹಾಜರಾಗಬಹುದು. ಆದ್ದರಿಂದ ನೀವೇ ಆಲೋಚನೆ ಮಾಡಿ ಯಾರು ಯಾರ ಮೇಲೆ ಒತ್ತಡ ಹಾಕಲಾಗುತ್ತದೆ. ಯಾರಿಗೆ ನಿರಾಳತೆ ಸಿಗುತ್ತದೆ ಎಂಬುವುದಾಗಿ ಯೋಜಿಸಿ. ಇದರಿಂದ ಯಾರು ಒತ್ತಡ ಹಾಕುತ್ತಿದ್ದಾರೆ ಎಂಬುದು ಸಾಕಷ್ಟು ಗೋಚರಿಸುತ್ತದೆ ಎಂದು ಖರ್ಗೆ ಟೀಕಾ ಪ್ರಹಾರ ಮಾಡಿದರು.
ಮಧ್ಯಾಹ್ನಕ್ಕೆ ಕಲಾಪ ಮುಂದೂಡಿಕೆ:ಮತ್ತೊಂದೆಡೆ, ಸಂಸತ್ತಿನಲ್ಲಿ ಉದ್ಯಮಿ ಗೌತಮ್ ಅದಾನಿ ಮತ್ತು ಹಿಂಡೆನ್‌ಬರ್ಗ್ ವರದಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ರಚನೆಗೆ ಪ್ರತಿಪಕ್ಷಗಳ ಹೋರಾಟ ಮುಂದುವರೆದಿದೆ. ಇಂದು ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸಂಸದೀಯ ಸಮಿತಿ ರಚನೆಗೆ ಒತ್ತಾಯಿಸಿ ಗದ್ದಲ ಸೃಷ್ಟಿಸಿದವು. ಇದರಿಂದ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಇಂದು ಸಹ ಸಂಸತ್ತಿಗೆ ಕಪ್ಪು ಬಟ್ಟೆ ಧರಿಸಿ ಬಂದ ಸದಸ್ಯರು ಸದನ ಸಮಾವೇಶಗೊಂಡ ಕೂಡಲೇ ಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಕಾಂಗ್ರೆಸ್, ಎಡ ಮತ್ತು ಡಿಎಂಕೆ ಸದಸ್ಯರು ಸದನದ ಬಾವಿಗೆ ಇಳಿದರು. ಈ ವೇಳೆ, ಸ್ಪೀಕರ್ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡುವಂತೆ ಪ್ರತಿಭಟನಾನಿರತ ಸದಸ್ಯರನ್ನು ಮನವಿ ಮಾಡಿದರು. ಆದರೆ, ಸತತ ಪ್ರತಿಭಟನೆಯ ನಡುವೆ ಸದನವನ್ನು ಮುಂದೂಡಿದರು. ಇದೇ ವೇಳೆ, ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು.
ಇದಕ್ಕೂ ಮುನ್ನ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಮಾನ ಮನಸ್ಕ ಪ್ರತಿಪಕ್ಷಗಳ ನಾಯಕರು ಸಭೆ ನಡೆಸಿದರು. ಮಂಗಳವಾರ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಅಧೀರ್ ರಂಜನ್ ಚೌಧರಿ, ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವ ಕುರಿತು ಚರ್ಚೆ ನಡೆಸುವಂತೆ ಕೋರಿದ್ದರು.
ಇದನ್ನೂ ಓದಿ:ಸೂರತ್ ಕೋರ್ಟ್ ಮುಂದೆ ಕಾಂಗ್ರೆಸ್ ನಾಯಕರ ದಂಡು: ಬಿಜೆಪಿ- ಕಾಂಗ್ರೆಸ್ ಮಧ್ಯೆ ಹಗ್ಗಜಗ್ಗಾಟ