ಲಡಾಖ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 79ನೇ ಜನ್ಮದಿನದ ಅಂಗವಾಗಿ ಭಾನುವಾರ (ಇಂದು) ಬೆಳಗ್ಗೆ ಲಡಾಖ್‌ನ ಪ್ಯಾಂಗೊಂಗ್ ಸರೋವರ ದಡದ ಬಳಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿ, "ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಭಾರತದ ಒಂದು ಇಂಚು ಭೂಮಿಯನ್ನೂ ಸಹ ಆಕ್ರಮಿಸಿಕೊಂಕೊಂಡಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆ ನಿಜವಲ್ಲ, ಚೀನಾದ ಸೈನಿಕರು ಭಾರತದ ಭೂಪ್ರದೇಶಕ್ಕೆ ನುಗ್ಗಿ ನಮ್ಮ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿ ಸಂಗತಿ" ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, "ಇಲ್ಲಿನ ಸ್ಥಳೀಯ ನಿವಾಸಿಗಳು ಚೀನಾ ದೇಶವು ನಮ್ಮ ಭೂಮಿಯನ್ನು ಕಸಿದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಚೀನಾ ಸೈನಿಕರು ತಮ್ಮ ಗೋಮಾಳವನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿದ್ದಾರೆ. ಆದರೆ, ಭಾರತದ ಒಂದು ಇಂಚು ಭೂಮಿಯನ್ನೂ ಚೀನಾ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಮೋದಿ ಹೇಳುತ್ತಾರೆ. ಮೋದಿಯವರ ಹೇಳಿಕೆ ನಿಜವಲ್ಲ. ಈ ಕುರಿತು ನೀವು ಇಲ್ಲಿ ಯಾರನ್ನಾದರೂ ಕೇಳಬಹುದು" ಎಂದು ಹೇಳಿದರು.
ಲಡಾಖ್‌ಗೆ ನೀಡಲಾದ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ ರಾಹುಲ್ ಗಾಂಧಿ, "ಲಡಾಖ್‌ನ ಜನರಿಂದ ಹಲವು ದೂರುಗಳು ಕೇಳಿಬಂದಿವೆ. ಇಲ್ಲಿನವರ ಜೀವನ ಸಂತೋಷದಿಂದ ಕೂಡಿಲ್ಲ, ಅವರು ಹೆಚ್ಚಿನ ಪ್ರಾತಿನಿಧ್ಯ ಬಯಸುತ್ತಿದ್ದಾರೆ. ರಾಜ್ಯವನ್ನು ಅಧಿಕಾರಶಾಹಿಯಿಂದ ನಡೆಸಬಾರದು, ಜನಪ್ರತಿನಿಧಿಗಳು ನಡೆಸಬೇಕು ಎಂದು ಜನರು ಹೇಳುತ್ತಿದ್ದಾರೆ. ನಿರುದ್ಯೋಗ ಹೆಚ್ಚಳವಾಗುತ್ತಿದೆ" ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದರು.