ಪುರಿ(ಒಡಿಶಾ) :ದೇಶದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣ ಜನವರಿ 31ರವರೆಗೆ ಬಂದ್ ಆಗಿರುವ ಐತಿಹಾಸಿಕ ದೇವಾಲಯ ಪುರಿ ಜಗನ್ನಾಥ ಇದೀಗ ಫೆಬ್ರವರಿ 1ರಿಂದಲೇ ಓಪನ್ ಆಗಲಿದೆ. ಇದಕ್ಕೆ ಸಂಬಂಧಿಸಿದಂತೆ ಪುರಿ ಜಿಲ್ಲಾಧಿಕಾರಿ ಮಹತ್ವದ ಸೂಚನೆ ಹೊರಡಿಸಿದ್ದಾರೆ.
ದೇಶದಲ್ಲಿ ಮೂರನೇ ಕೋವಿಡ್ ಅಲೆ ಜೋರಾಗಿದ್ದ ಕಾರಣ ದೇಶದ ಬಹುತೇಕ ಎಲ್ಲ ದೇವಾಲಯಗಳು ಬಂದ್ ಆಗಿದ್ದವು. ಈ ಸಾಲಿನಲ್ಲಿ ಐತಿಹಾಸಿಕ ಒಡಿಶಾದ ಪುರಿ ಜಗನ್ನಾಥ ದೇವಾಲಯ ಸಹ ಸೇರಿಕೊಂಡಿತ್ತು. ಆದರೆ, ಇದೀಗ ಭಕ್ತರಿಗಾಗಿ ಓಪನ್ ಆಗಲಿದ್ದು, ಫೆ.1ರಿಂದ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡಬಹುದು ಎಂದು ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ತಿಳಿಸಿದ್ದಾರೆ.
ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಮತ್ತು ದೇವಾಲಯದ ದಾಸ್ಯಕಾರರ ಅತ್ಯುನ್ನತ ಸಂಸ್ಥೆ ಜೊತೆ ನಡೆದ ಸಭೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.