ನವದೆಹಲಿ:2023 ನೇ ಸಾಲಿನ ಕೇಂದ್ರ ಬಜೆಟ್ ಸಂಸತ್ನಲ್ಲಿ ಮಂಡನೆಯಾಗುತ್ತಿದ್ದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅಂತ್ಯೋದಯ ಯೋಜನೆಯು ಈ ವರ್ಷವು ಮುಂದುವರೆಯಲಿದ್ದು, ಇದರ ಸಂಪೂರ್ಣ ವೆಚ್ಚ 20 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರವು ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದಿನ ಕೇಂದ್ರ ಬಜೆಟ್ನಲ್ಲಿ ಘೋಷಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಯಾರು ಹಸಿವಿನಿಂದ ಬಳಲಿಲ್ಲವೆಂದು ಖಚಿತ ಪಡಿಸಿದ್ದು, ಒಟ್ಟು 28 ತಿಂಗಳಿನಲ್ಲಿ 80 ಕೋಟಿ ಜನರಿಗೆ ನಾವು ಇದೇ ಯೋಜನೆಯಡಿಯಲ್ಲಿ ಆಹಾರವನ್ನು ಒದಗಿಸಿದ್ದೇವೆ. ಮುಂದೆ ಕೂಡ ಇದೇ ನಮ್ಮ ಬದ್ಧತೆಯನ್ನು ಮುಂದುವರಿಸುತ್ತಾ ನಾವು ಜನವರಿ 2023 ರಿಂದ ಎಲ್ಲಾ ಅಂತ್ಯೋದಯ ಹಾಗೂ ಆದ್ಯತೆ ಇರುವ ಮನೆಗಳಿಗೆ ಆಹಾರವನ್ನು ನೀಡುವುದನ್ನು ಪ್ರಾರಂಭಿಸಲಿದ್ದೇವೆ ಎಂದರು. ಹಾಗೆ G20 ಪ್ರೆಸಿಡೆನ್ಸಿಯು ವಿಶ್ವ ಆರ್ಥಿಕ ಕ್ರಮದಲ್ಲಿ ನಮ್ಮ ಪಾತ್ರವನ್ನು ಬಲಪಡಿಸಲು ನಮಗೆ ಅನನ್ಯ ಅವಕಾಶವನ್ನು ನೀಡುತ್ತದೆ. ಇದರ ಮೂಲಕ ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ ನಾವು ಮಹತ್ವಾಕಾಂಕ್ಷೆಯ ಜನಕೇಂದ್ರಿತ ಕಾರ್ಯಸೂಚಿಯನ್ನು ನಡೆಸುತ್ತಿದ್ದೇವೆ.