ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಇಡಿಎಫ್ಸಿ (ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್)ನ ನ್ಯೂ ಭೌಪುರ್- ನ್ಯೂ ಖುರ್ಜಾ ರೈಲ್ವೆ ವಿಭಾಗಕ್ಕೆ ಇಂದು ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಈ ರೈಲ್ವೆ ವಿಭಾಗಕ್ಕೆ ಚಾಲನೆ ನೀಡಲಿದ್ದು, ಪ್ರಧಾನ ಮಂತ್ರಿಗಳ ಕಚೇರಿಯ ಮಾಹಿತಿಯಂತೆ ಪ್ರಯಾಗರಾಜ್ನಲ್ಲಿ ಇಡಿಎಫ್ಸಿಯ ಆಪರೇಷನ್ ಕಂಟ್ರೋಲ್ ರೂಂ ಅನ್ನು ಕೂಡಾ ಉದ್ಘಾಟನೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಉಪಸ್ಥಿತಿ ವಹಿಸಲಿದ್ದಾರೆ.
ಇದನ್ನೂ ಓದಿ:100ನೇ 'ಕಿಸಾನ್ ರೈಲಿ'ಗೆ ಪ್ರಧಾನಿ ಮೋದಿ ಹಸಿರು ನಿಶಾನೆ
ಇಡಿಎಫ್ಸಿಯ 351 ಕಿ.ಮೀ ನ್ಯೂ ಭೌಪುರ್ - ಹೊಸ ಖುರ್ಜಾ ವಿಭಾಗವು ಉತ್ತರ ಪ್ರದೇಶದಲ್ಲಿದೆ ಮತ್ತು ಈ ಯೋಜನೆಗೆ 5,750 ಕೋಟಿ ರೂಪಾಯಿಯನ್ನು ವೆಚ್ಚ ಮಾಡಲಾಗಿದೆ.
ಏನಿದು ಇಡಿಎಫ್ಸಿ.?
ಇಡಿಎಫ್ಸಿ ಸರಕು ಸೇವೆಗಳ ಸಾಗಣೆಗೆಂದೇ ಮೀಸಲಿಟ್ಟು ರೂಪಿಸಲಾದ ಯೋಜನೆಯಾಗಿದ್ದು, ಪಂಜಾಬ್ನ ಲುದಿಯಾನಾ ಸಮೀಪದ ಸಹ್ನೇವಾಲ್ ಬಳಿ ಆರಂಭವಾಗಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳನ್ನು ದಾಟಿ ಪಶ್ಚಿಮ ಬಂಗಾಳದ ದಂಗುಣಿ ಸಮೀಪ ಕೊನೆಗೊಳ್ಳುತ್ತದೆ.
ಒಟ್ಟು 1856 ಕಿಲೋಮೀಟರ್ ದೂರದ ಪ್ರದೇಶಗಳನ್ನು ಈ ಮಾರ್ಗ ಸಂಪರ್ಕಿಸಲಿದ್ದು, ಈ ಮಾರ್ಗದಲ್ಲಿ ಬರುವ ಕೈಗಾರಿಕೆಗಳ ಅಭಿವೃದ್ದಿಗೆ ವರದಾನವಾಗಲಿದೆ. ಈಗ ಸದ್ಯಕ್ಕೆ ಉತ್ತರ ಪ್ರದೇಶದಲ್ಲಿರುವ ನ್ಯೂ ಭೌಪುರ್- ನ್ಯೂ ಖುರ್ಜಾ ರೈಲ್ವೆ ವಿಭಾಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.