ಲೇಪ್ಚಾ(ಹಿಮಾಚಲ ಪ್ರದೇಶ): ದೇಶಾದ್ಯಂತ ಇಂದು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಬೆಳಕಿನ ಹಬ್ಬಕ್ಕೆ ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ಬಾರಿಯಂತೆ ಈ ಬಾರಿಯೂ ಯೋಧರ ಜೊತೆ ದೀಪಾವಳಿ ಆಚರಿಸಿದರು. ಹಿಮಾಚಲ ಪ್ರದೇಶದ ಲೇಪ್ಚಾ ಗ್ರಾಮಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಇಲ್ಲಿನ ಯೋಧರ ಜೊತೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ವೀರ ಯೋಧರ ಜೊತೆ ದೀಪಾವಳಿ ಆಚರಿಸಲು ಹಿಮಾಚಲ ಪ್ರದೇಶದ ಲೇಪ್ಚಾ ಗ್ರಾಮಕ್ಕೆ ತಲುಪಿರುವುದಾಗಿ ಪೋಸ್ಟ್ ಮಾಡಿದ್ದಾರೆ.
ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ:ಹಿಮಾಚಲ ಪ್ರದೇಶದ ಚೀನಾ ಗಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಆಚರಿಸಿದರು. ಹಿಮಾಚಲ ಪ್ರದೇಶವು ಚೀನಾದೊಂದಿಗೆ ಸುಮಾರು 260 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಕಿನೌರ್ ಜಿಲ್ಲೆಯು ಚೀನಾದೊಂದಿಗೆ 140 ಕಿಮೀ ಗಡಿ ಹಂಚಿಕೊಂಡಿದ್ದು, ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯು 80 ಕಿಮೀನಷ್ಟು ಗಡಿ ಭಾಗವನ್ನು ಹಂಚಿಕೊಂಡಿದೆ. ಈ ಸಂಬಂಧ ಲೇಪ್ಚಾ ಗ್ರಾಮದಲ್ಲಿ ಇಂಡೋ - ಟಿಬೆಟನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನಾ ಕ್ಯಾಂಪ್ ಮಾಡಲಾಗಿದೆ. ಗಡಿ ಭಾಗದ ಒಟ್ಟು 20 ಕಡೆಗಳಲ್ಲಿ ಇಂಡೋ - ಟಿಬೆಟನ್ ಗಡಿ ಪೊಲೀಸ್ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಪ್ರತಿ ವರ್ಷವು ಪ್ರಧಾನಿ ನರೇಂದ್ರ ಮೋದಿ ಅವರು ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ಕಾರ್ಗಿಲ್ನಲ್ಲಿ ಸೇನಾಪಡೆಗಳೊಂದಿಗೆ ದೀಪಾವಳಿ ಆಚರಿಸಿದ್ದರು. ಈ ವೇಳೆ ದೀಪಾವಳಿ ಎಂದರೆ ಭಯೋತ್ಪಾದನೆಯನ್ನು ಅಂತ್ಯಗೊಳಿಸುವ ಹಬ್ಬ. ಇದನ್ನು ಕಾರ್ಗಿಲ್ ಮಾಡಿ ತೋರಿಸಿತ್ತು ಎಂದು ಹೇಳಿದ್ದರು.