ಕರ್ನಾಟಕ

karnataka

ಐಬಿ, ರಾ ವರದಿಗಳನ್ನು ಸುಪ್ರೀಂಕೋರ್ಟ್​ ಕೊಲಿಜಿಯಂ ಬಹಿರಂಗಪಡಿಸಿದ್ದು ಕಳವಳಕಾರಿ: ಕಾನೂನು ಸಚಿವ ರಿಜಿಜು

By

Published : Jan 24, 2023, 7:35 PM IST

ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಯಾಂಗದ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ನೆರವು ನೀಡಲು ಮುಂದಾಗಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

PM Modi proactive in meeting demands of judiciary, says Union Law Min Kiren Rijiju
PM Modi proactive in meeting demands of judiciary, says Union Law Min Kiren Rijiju

ನವದೆಹಲಿ: ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್‌ನ (ರಾ) ಸೂಕ್ಷ್ಮ ವರದಿಗಳ ಕೆಲವು ಭಾಗಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಸಾರ್ವಜನಿಕರಿಗೆ ಮುಕ್ತವಾಗಿ ಕಾಣುವಂತೆ ಪ್ರದರ್ಶಿಸಿರುವುದು ಗಂಭೀರ ಕಳವಳಕಾರಿ ವಿಷಯ ಎಂದು ಕಾನೂನು ಸಚಿವ ಕಿರಣ್ ರಿಜಿಜು ಮಂಗಳವಾರ ಹೇಳಿದ್ದಾರೆ. ಗುಪ್ತಚರ ಸಂಸ್ಥೆಯ ಅಧಿಕಾರಿಗಳು ರಾಷ್ಟ್ರಕ್ಕಾಗಿ ರಹಸ್ಯವಾಗಿ ಕೆಲಸ ಮಾಡುತ್ತಾರೆ. ಆದರೆ ಇಂತಹ ವರದಿಗಳನ್ನು ಸಾರ್ವಜನಿಕಗೊಳಿಸಿದರೆ ಅವರು ಭವಿಷ್ಯದಲ್ಲಿ ಕೆಲಸ ಮಾಡಬೇಕಾದರೆ ಎರಡು ಬಾರಿ ಯೋಚಿಸುವಂತಾಗುತ್ತದೆ ಎಂದು ಹೇಳಿದರು.

ಕಳೆದ ವಾರ ಹೈಕೋರ್ಟ್​​​ ನ್ಯಾಯಾಧೀಶರ ನೇಮಕಾತಿಗಾಗಿ ಉನ್ನತ ನ್ಯಾಯಾಲಯವು ಶಿಫಾರಸು ಮಾಡಿದ ಕೆಲವು ಹೆಸರುಗಳನ್ನು ಸಾರ್ವಜನಿಕಗೊಳಿಸಲಾದ ಐಬಿ ಮತ್ತು ರಾ ವರದಿಗಳನ್ನೊಳಗೊಂಡ ಇತ್ತೀಚಿನ ಸುಪ್ರೀಂಕೋರ್ಟ್‌ನ ಕೊಲಿಜಿಯಂ ನಿರ್ಣಯಗಳ ಬಗ್ಗೆ ಅವರು ಪ್ರತಿಕ್ರಿಯಿಸಿದರು.

ಗುಪ್ತಚರ ಮಾಹಿತಿಗಳನ್ನು ತಿರಸ್ಕರಿಸುವ ಸಂದರ್ಭದಲ್ಲಿ ಕೊಲಿಜಿಯಂ ಈ ತಿಂಗಳ ಆರಂಭದಲ್ಲಿ ಸರ್ಕಾರಕ್ಕೆ ಸಲ್ಲಿಸಿದ ಹೆಸರುಗಳನ್ನು ಪುನರುಚ್ಚರಿಸಿದೆ. ರಾ ಮತ್ತು ಐಬಿಯ ಸೂಕ್ಷ್ಮ ಅಥವಾ ರಹಸ್ಯ ವರದಿಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸುವುದು ಗಂಭೀರ ಕಾಳಜಿಯ ವಿಷಯವಾಗಿದ್ದು, ಸೂಕ್ತ ಸಮಯದಲ್ಲಿ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಕೇಂದ್ರ ಸಚಿವ ರಿಜಿಜು ಕಾನೂನು ಸಚಿವಾಲಯದ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಇ - ಸಮಿತಿ ಪ್ರಾರಂಭಿಸಿದ ಇ - ಕೋರ್ಟ್ ಯೋಜನೆಯು ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದೆ ಎಂದು ರಿಜಿಜು ತಿಳಿಸಿದ್ದಾರೆ. ಈ ಪ್ರಸ್ತಾವನೆಗೆ ಭಾರಿ ಮೊತ್ತ ವೆಚ್ಚವಾಗಲಿದೆ. ನ್ಯಾಯಾಂಗದ ಬೇಡಿಕೆಗಳನ್ನು ಪೂರೈಸಲು ಅಗತ್ಯ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಸರ್ಕಾರ ಮತ್ತು ನ್ಯಾಯಾಂಗದ ಜಂಟಿ ಪ್ರಯತ್ನವು ದೇಶದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಂತ್ರಜ್ಞಾನವು ಅದರಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಇಂದು ಒಟ್ಟು ಬಾಕಿ ಪ್ರಕರಣಗಳ ಸಂಖ್ಯೆ 4.90 ಕೋಟಿ. ನ್ಯಾಯ ವಿಳಂಬ ಎಂದರೆ ನ್ಯಾಯವನ್ನು ನಿರಾಕರಿಸುವುದು ಎಂದರ್ಥ. ಈ ಬಾಕಿ ಪ್ರಕರಣಗಳನ್ನು ಕಡಿಮೆ ಮಾಡುವ ಏಕೈಕ ಮಾರ್ಗವೆಂದರೆ ಸರ್ಕಾರ ಮತ್ತು ನ್ಯಾಯಾಂಗದ ಒಗ್ಗೂಡುವಿಕೆ. ತಂತ್ರಜ್ಞಾನವು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಕಾನೂನು ಸಚಿವ ರಿಜಿಜು ಹೇಳಿದರು.

ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಕಾನೂನು ಸಚಿವ ಕಿರಣ್ ರಿಜಿಜು ವಾಗ್ದಾಳಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಕಾನೂನು ಸಚಿವ ಕಿರಣ್ ರಿಜಿಜು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ಕೆಲವು ಜನರು ತಮ್ಮ ವಸಾಹತುಶಾಹಿ ಮಾನಸಿಕತೆಯಿಂದ ಹೊರಬಂದಿಲ್ಲ ಮತ್ತು ಅವರಿಗೆ ಬಿಳಿಯರು ಇನ್ನೂ ಅವರು ಆಡಳಿತಗಾರರಾಗಿದ್ದಾರೆ ಎಂದು ರಿಜಿಜು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಜನರಿಗೆ, ಬಿಳಿಯ ಆಡಳಿತಗಾರರು ಇನ್ನೂ ಯಜಮಾನರಾಗಿದ್ದಾರೆ. ಕೆಲವರಿಗೆ ಭಾರತದ ಬಗ್ಗೆ ಅಂಥವರ ನಿರ್ಧಾರ ಅಂತಿಮವಾಗಿರುತ್ತದೆ, ಹೊರತು ಭಾರತದ ಸುಪ್ರೀಂಕೋರ್ಟ್ ನಿರ್ಧಾರ ಅಥವಾ ಭಾರತದ ಜನರ ಇಚ್ಛೆಯಲ್ಲ ಎಂದು ರಿಜಿಜು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಕಳೆದ ವಾರ ಬಿಡುಗಡೆಯಾದ ಪಿಎಂ ಮೋದಿ ಅವರ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಸರಣಿಯನ್ನು ಭಾರತ ವಿದೇಶಾಂಗ ಇಲಾಖೆ ಈಗಾಗಲೇ ಖಂಡಿಸಿದೆ.

ಇದನ್ನೂ ಓದಿ: ಸತ್ಯ ಯಾವತ್ತಿದ್ದರೂ ಹೊರಬರುತ್ತದೆ: ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ABOUT THE AUTHOR

...view details