ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಜುಲೈ 1 ರಿಂದ ಆರಂಭವಾಗಿರುವ ಹಿಂದುಗಳ ಪವಿತ್ರ ಅಮರನಾಥ ಯಾತ್ರೆಯಲ್ಲಿ ಈವರೆಗೂ 67,566 ಯಾತ್ರಾರ್ಥಿಗಳು ಅಮರನಾಥ ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ಅಮರನಾಥ ದೇಗುಲ ಮಂಡಳಿ ಮಾಹಿತಿ ನೀಡಿದೆ.
ಬುಧವಾರದಂದು 18,354 ಯಾತ್ರಿಕರು ಬಾಲ್ಟಾಲ್ ಬೇಸ್ ಕ್ಯಾಂಪ್ ಮತ್ತು ನುನ್ವಾನ್ ಬೇಸ್ ಕ್ಯಾಂಪ್‌ನಿಂದ ಅಮರನಾಥ ಗುಹೆ ದೇಗುಲಕ್ಕೆ ತೆರಳಿದರು. ಇವರಲ್ಲಿ 12,483 ಪುರುಷರು, 5,146 ಮಹಿಳೆಯರು, 457 ಮಕ್ಕಳು, 266 ಸಾಧುಗಳು ಮತ್ತು 2 ಸಾಧ್ವಿಗಳು ಇದ್ದರು ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
6 ದಿನಗಳಲ್ಲಿ ಒಟ್ಟು 67,566 ಯಾತ್ರಿಕರು ಅಮರನಾಥದ ದರ್ಶನ ಭಾಗ್ಯ ಪಡೆದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ. ಯಾತ್ರಾರ್ಥಿಗಳು ತಮ್ಮ ಪ್ರಯಾಣದ ವೇಳೆ ರಾಜ್ಯ ಸಂಸ್ಥೆಗಳು ಮತ್ತು ನಾಗರಿಕ ಇಲಾಖೆಗಳಿಂದ ನೀಡಲಾಗುವ ಎಲ್ಲಾ ಅಗತ್ಯ ವಸ್ತುಗಳು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅದು ಸಲಹೆ ನೀಡಿದೆ.
ಪೊಲೀಸ್, ಎಸ್‌ಡಿಆರ್‌ಎಫ್, ಸೈನ್ಯ, ಅರೆಸೇನೆ, ಆರೋಗ್ಯ, ಪಿಡಿಡಿ, ಪಿಎಚ್‌ಇ, ಯುಎಲ್‌ಬಿ, ಮಾಹಿತಿ, ಕಾರ್ಮಿಕ, ಅಗ್ನಿಶಾಮಕ ಮತ್ತು ತುರ್ತು, ಶಿಕ್ಷಣ ಮತ್ತು ಪಶುಸಂಗೋಪನೆ ಸೇರಿದಂತೆ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ 'ಸಂಜಿ'(SANJY) ಸಂಸ್ಥೆ ಅಗತ್ಯ ವ್ಯವಸ್ಥೆ ಮಾಡಿದೆ. ಪುರುಷ ರಕ್ಷಕರು ಮತ್ತು ಯಂತ್ರಗಳನ್ನೂ ಯಾತ್ರೆಯುದ್ದಕ್ಕೂ ನಿಯೋಜಿಸಲಾಗಿದೆ.