ನಮ್ಮ ದೇಶ ವಿವಿಧ ಜನ, ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಎಲ್ಲದ್ರಲ್ಲೂ ಡಿಫರೆಂಟ್. ಇನ್ನು ಆಹಾರ ಪದ್ಧತಿಯಲ್ಲಿ ಕೂಡ ಭಾರತ ಹಿಂದೆ ಬಿದ್ದಿಲ್ಲ. ಅದ್ರಲ್ಲೂ ಕೂಡ ಬಗೆ ಬಗೆ ತಿನಿಸುಗಳನ್ನು ಮಾಡಲಾಗುತ್ತೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋದ್ರೆ ಅಲ್ಲಿನ ಊಟ, ಉಪಚಾರಗಳೇ ಬೇರೆ. ಇನ್ನು ನಮ್ಮ ದೇಶದ ಬುಡಕಟ್ಟು ಜನಾಂಗದವರು ತಿನ್ನುವ ಆಹಾರಗಳೇ ಬೇರೆ. ಅಂತಹ ಆಹಾರಕ್ಕೆ ಇಲ್ಲೊಂದು ಉದಾಹರಣೆ ಇದೆ.
ಒಡಿಶಾದ ಗಜಪತಿ ಎಂಬ ಪ್ರದೇಶದಲ್ಲಿ ಕಾಡಿನಲ್ಲಿ ಸಿಗುವ ಇರುವೆಗಳಿಂದ ಚಟ್ನಿ ಮಾಡಿಕೊಂಡು ತಿಂತಾರೆ ಅಂದ್ರೆ ನಾವು ನಂಬಲೇಬೇಕು. ಇಲ್ಲಿ ವಾಸಿಸುವ ಬುಡಕಟ್ಟು ಜನರು ಕಪ್ಪು ಇರುವೆಗಳಿಂದ ಮಾಡಿದ ಚಟ್ನಿಯನ್ನು ತುಂಬಾ ಇಷ್ಟಪಟ್ಟು ತಿಂತಾರೆ. ಅಲ್ಲದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತಾನೂ ಹೇಳ್ತಾರೆ.
ಒಡಿಶಾದ ಈ ಬುಡಕಟ್ಟು ಜನರಿಗೆ ಇರುವೆ ಚಟ್ನಿ ಬಲು ಇಷ್ಟ... ಕೊರೊನಾಗೆ ಇದು ಮದ್ದಂತೆ! ಕೊರೊನಾಗೆ ಇರುವೆ ಚಟ್ನಿಯೇ ಮದ್ದಂತೆ!
ಗಜಪತಿ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಜನರು ಹೇಳುವ ಪ್ರಕಾರ ಈ ಇರುವೆ ಚಟ್ನಿ ಕೊರೊನಾಗೆ ರಾಮಬಾಣವಂತೆ. ಇದನ್ನು ತಿಂದ್ರೆ ಕೊರೊನಾ ಹತ್ತಿರ ಕೂಡ ಸುಳಿಯೋದಿಲ್ಲವಂತೆ. ಹಾಗಾಗಿ ಇಲ್ಲಿ ಯಾರೊಬ್ಬರಿಗೂ ಕೊರೊನಾ ಸೋಂಕು ತಗುಲಿಲ್ಲ ಅಂತಾರೆ ಅಲ್ಲಿನ ಜನ.
ಕಾಡಿನಲ್ಲಿ ಹೋಗುವಾಗ ಈ ಇರುವೆಗಳು ಕಂಡ್ರೆ ಅವುಗಳನ್ನು ತಂದು ಬೆಂಕಿಯಲ್ಲಿ ಹದವಾಗಿ ಸುಟ್ಟು ಅದಕ್ಕೆ ಈರುಳ್ಳಿ, ಶುಂಟಿ, ಉಪ್ಪು ಮತ್ತು ಮೆಣಸಿನಕಾಯಿ ಹಾಕಿ ಬಂಡೆಯ ಮೇಲೆ ರುಬ್ಬಿ ಚಟ್ನಿ ಮಾಡಿಕೊಂಡು ತಿಂತಾರೆ.
ಇನ್ನು ವೈಜ್ಞಾನಿಕವಾಗಿ ಹೇಳೋದಾದ್ರೆ ಈ ಇರುವೆಗಳಲ್ಲಿ ಫಾರ್ಮಿಕ್ ಆ್ಯಸಿಡ್ ಇದ್ದು, ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳನ್ನು ನಿಯಂತ್ರಿಸುತ್ತದೆಯಂತೆ. ಇದ್ರಿಂದ ಬಹುಪಾಲು ಬುಡಕಟ್ಟು ಜನಾಂಗದವರು ಈ ಇರುವೆ ಚಟ್ನಿಯನ್ನು ತಿಂತಾರಂತೆ.