ಮುಂಬೈ: ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ನಿನ್ನೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮುಂಬೈ ನಿವಾಸದಲ್ಲಿ ಭೇಟಿ ಮಾಡಿದರು. ರಾಷ್ಟ್ರೀಯ ರಸ್ತೆ ಸುರಕ್ಷತಾ ಮಿಷನ್ ಚಾಂಪಿಯನ್ ಅಭಿಯಾನ ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಅಭಿಷೇಕ್ ಬಚ್ಚನ್ ಕೂಡ ಉಪಸ್ಥಿತರಿದ್ದರು.
ನಟ ಅಮಿತಾಭ್ ಬಚ್ಚನ್ ಮುಂಬೈನ ಸಂಚಾರ ನಿಯಮಗಳ ಬಗ್ಗೆ ಆಗಾಗ್ಗೆ ಕಳವಳ ವ್ಯಕ್ತಪಡಿಸುತ್ತಿರುತ್ತಾರೆ. ಈ ಹಿನ್ನೆಲೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಿಷನ್ ಬಲಪಡಿಸಲು ಗಡ್ಕರಿ ಅಮಿತಾಬ್ ಬಚ್ಚನ್ ಬೆಂಬಲ ಕೋರಿದ್ದಾರೆ. ಈ ಕುರಿತಾದ ಫೋಟೋಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಅಂಕಿ- ಅಂಶಗಳ ಪ್ರಕಾರ, ಯುದ್ಧದಲ್ಲಿ ಸಾವನ್ನಪ್ಪುವರ ಸಂಖ್ಯೆಗಿಂತ ರಸ್ತೆ ಅಪಘಾತದಲ್ಲಿ ಮೃತಪಡುತ್ತಿರುವವರ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ, ರಸ್ತೆ ದುರಂತಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನ ಪ್ರಾರಂಭಿಸಿದ್ದು, ಈ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ:ರಸ್ತೆ ಸುರಕ್ಷತಾ ಜಾಗೃತಿ: ಸೈಕಲ್ ಏರಿ ಅರಿವು ಮೂಡಿಸುತ್ತಿರುವ ವ್ಯಕ್ತಿ
ರಸ್ತೆ ಅಪಘಾತದ ವರದಿ 2019 ರ ಪ್ರಕಾರ, 2019 ರಲ್ಲಿ ದೇಶದಲ್ಲಿ 4 ಲಕ್ಷ 49 ಸಾವಿರದ 2 ಅಪಘಾತ ಪ್ರಕರಣಗಳು ಸಂಭವಿಸಿವೆ. ಇದರಲ್ಲಿ ಬರೋಬ್ಬರಿ 1,51,113 ಜನರು ಸಾವನ್ನಪ್ಪಿದ್ದಾರೆ. 4,51,361 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದವರಲ್ಲಿ 18 ರಿಂದ 60 ರ ವಯೋಮಾನದವರು ಶೇಕಡಾ 84 ರಷ್ಟಿದ್ದಾರೆ. ಪ್ರತಿ ನಾಲ್ಕು ನಿಮಿಷಕ್ಕೊಂದು ಅಪಘಾತ ಸಂಭವಿಸುತ್ತಿದೆ.
ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನ:ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನದ ಮೂಲಕ ರಸ್ತೆ ಬಳಕೆದಾರರಿಗೆ ಅರಿವು ಮೂಡಿಸಲಾಗುತ್ತಿದೆ. ವೇಗದ ಚಾಲನೆ ಮಾಡುವುದು, ಸಂಚಾರ ನಿಯಮ ಉಲ್ಲಂಘಿಸುವುದು ಸೇರಿದಂತೆ ವಿವಿಧ ಅಂಶಗಳನ್ನು ಗಮನಿಸಲು ಮಾರ್ಗಮಧ್ಯೆ ಚೆಕ್ ಪಾಯಿಂಟ್ ನಿರ್ಮಾಣ. ಸಾಮಾನ್ಯ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಕ್ರಮಿಸಿದ ಅಥವಾ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಸವಾರರಿಗೆ ದಂಡ, ಸಂಚಾರ ನಿಯಮಗಳ ಕುರಿತು ಚರ್ಚಾ ಸ್ಪರ್ಧೆ, ರಸ್ತೆ ಸುರಕ್ಷತಾ ನಿಯಮಗಳ ಪೋಸ್ಟರ್ ಅಳವಡಿಕೆ ಸೇರಿದಂತೆ ಹತ್ತು ಹಲವು ವಿದಾನಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.
ಇದನ್ನೂ ಓದಿ:ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತಾ ಮಾಸ ವೇದಿಕೆಯಾಗಬೇಕು: ಶಾಸಕ ಸಂಜೀವ ಮಠಂದೂರು