ಕರ್ನಾಟಕ

karnataka

ETV Bharat / bharat

ಬಾಂಬ್​ ಸ್ಫೋಟ ಪ್ರಕರಣ: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಎನ್​ಐಎ ಮಿಂಚಿನ ದಾಳಿ - ಕರ್ನಾಟಕ ತಮಿಳುನಾಡಿನಲ್ಲಿ ಬಾಂಬ್​ ಸ್ಫೋಟ ಪ್ರಕರಣ

ಕರ್ನಾಟಕ, ತಮಿಳುನಾಡು ಬಾಂಬ್​ ಸ್ಫೋಟ ಪ್ರಕರಣ- ಎನ್​ಐಎ ಕಾರ್ಯಾಚರಣೆ - ಮೂರು ರಾಜ್ಯಗಳ 60 ಸ್ಥಳಗಳಲ್ಲಿ ಶೋಧ

NIA raids in Tamil Nadu i
ತಮಿಳುನಾಡಿನಲ್ಲಿ 45 ಕಡೆ ಎನ್​ಐಎ ದಾಳಿ

By

Published : Feb 15, 2023, 9:17 AM IST

Updated : Feb 15, 2023, 10:01 AM IST

ಚೆನ್ನೈ (ತಮಿಳುನಾಡು):ಕೊಯಮತ್ತೂರು ಕಾರ್​ ಬಾಂಬ್​, ಕರ್ನಾಟಕದ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ತಮಿಳುನಾಡು, ಕರ್ನಾಟಕ, ಕೇರಳದ ವಿವಿಧ ಪ್ರದೇಶಗಳ ಮೇಲೆ ಇಂದು ಮಿಂಚಿನ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

2022 ರ ಅಕ್ಟೋಬರ್​ 23 ರಂದು ತಮಿಳುನಾಡಿನ ಕೊಯಮತ್ತೂರು, ನವೆಂಬರ್​ 19 ರಂದು ಕರ್ನಾಟಕದ ಮಂಗಳೂರಿನಲ್ಲಿ ಬಾಂಬ್​ ಸ್ಫೋಟ ಸಂಭವಿಸಿದ್ದವು. ಇವೆರಡೂ ಪ್ರಕರಣಗಳ ಹಿಂದೆ ಉಗ್ರರ ಕೈವಾಡ ಶಂಕೆಯ ಮೇಲೆ ಎನ್​ಐಎ ಈ ದಾಳಿ ನಡೆಸಿದೆ.

ತಮಿಳುನಾಡಿನ ಕೊಡುಂಗಯ್ಯೂರು ಮತ್ತು ಕೇರಳದ ಮನ್ನಾಡಿ ಸೇರಿದಂತೆ ಮೂರು ರಾಜ್ಯಗಳ ಸುಮಾರು 45 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಕಳೆದ ವರ್ಷ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೊಟ್ಟೈ ಈಶ್ವರನ್ ದೇವಾಲಯದ ಮುಂಭಾಗದಲ್ಲಿ ಸ್ಫೋಟಕಗಳನ್ನು ತುಂಬಿದ ಕಾರಿನಲ್ಲಿ ಬಾಂಬ್ ಸ್ಫೋಟಿಸಿದ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿತ್ತು.

ಮೃತ ಜಮೇಶಾ ಮುಬೀನ್ ಅಂತಾರಾಷ್ಟ್ರೀಯ ಉಗ್ರ ಸಂಘಟನೆಯಾದ ಐಸಿಸ್‌ನೊಂದಿಗೆ ಗುರುತಿಸಿಕೊಂಡಿದ್ದ. ಭಯೋತ್ಪಾದನೆ ಸೃಷ್ಟಿಸುವ ಸಲುವಾಗಿ ಆತ್ಮಾಹುತಿ ದಾಳಿ ನಡೆಸಲು ಮತ್ತು ದೇವಾಲಯದ ಸಂಕೀರ್ಣಕ್ಕೆ ವ್ಯಾಪಕ ಹಾನಿಯನ್ನುಂಟುಮಾಡಲು ಯೋಜಿಸಿದ್ದ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿತ್ತು. ಆರೋಪಿಗಳು ಈರೋಡ್ ಜಿಲ್ಲೆಯ ಸತ್ಯಮಂಗಲಂ ಅರಣ್ಯದ ಅಸನೂರು ಮತ್ತು ಕಡಂಬೂರ್ ಪ್ರದೇಶಗಳಲ್ಲಿ ಕ್ರಿಮಿನಲ್ ಸಂಚು ರೂಪಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.

ಬಂಧಿತ ಆರೋಪಿ ಉಮರ್ ಫಾರೂಕ್ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಮೃತ ಜಮೇಶಾ ಮುಬೀನ್ ಸೇರಿದಂತೆ ಮೊಹಮ್ಮದ್ ಅಜರುದ್ದೀನ್, ಶೇಖ್ ಹಿದಾಯತುಲ್ಲಾ ಮತ್ತು ಸನೋಫರ್ ಅಲಿ ಭಾಗವಹಿಸಿದ್ದರು. ಎಲ್ಲರೂ ಭಯೋತ್ಪಾದಕ ಕೃತ್ಯಗಳಿಗೆ ತಯಾರಿ ಮತ್ತು ಅದನ್ನು ಕಾರ್ಯಗತಗೊಳಿಸಲು ಬಗ್ಗೆ ಸಂಚು ರೂಪಿಸಿದ್ದರು ಎಂದು ಎನ್​ಐಎ ತಿಳಿಸಿದೆ.

ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟ:ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕರ್ನಾಟಕದ ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಪ್ರೆಶರ್ ಕುಕ್ಕರ್ ಸ್ಫೋಟಗೊಂಡ ಪ್ರಕರಣವನ್ನೂ ಎನ್‌ಐಎ ತನಿಖೆಗೆ ನೀಡಲಾಗಿದೆ. ಶಂಕಿತ ಉಗ್ರ ಮೊಹಮ್ಮದ್ ಶಾರಿಕ್ ಸುಧಾರಿತ ಸ್ಫೋಟಕ ಸಾಧನದಿಂದ (ಐಇಡಿ) ತಯಾರಿಸಿದ ಪ್ರೆಶರ್ ಕುಕ್ಕರ್ ಬಾಂಬ್ ಅನ್ನು ಹೊತ್ತೊಯ್ಯುತ್ತಿದ್ದ. ಈ ವೇಳೆ ಅದು ಆಟೋದಲ್ಲೇ ಸ್ಫೋಟಗೊಂಡಿತ್ತು. ಇದರಿಂದ ಮೊಹಮ್ಮದ್ ಶಾರಿಕ್ ಹಾಗೂ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದರು.

ಕರಾವಳಿ ಪ್ರದೇಶ ಸೇರಿ ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ದೊಡ್ಡ ಪ್ರಮಾಣದ ದಾಳಿಯನ್ನು ನಡೆಸುವ ಭಾಗವಾಗಿ ಕುಕ್ಕರ್ ಬಾಂಬ್ ಸ್ಫೋಟ ದಾಳಿಗೆ ಸಂಚು ರೂಪಿಸಲಾಗಿತ್ತು ಎಂದು ಎನ್​ಐಎ ತನಿಖೆಯಲ್ಲಿ ತಿಳಿಸಿತ್ತು.

ಗಾಯಗೊಂಡ ಶಾರೀಕ್ ಮೊಹಮದ್​ ಬಂಧಿಸಿ ವಿಚಾರಣೆ ನಡೆಸಿದಾಗ ಐಸಿಸ್​ ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ್ದು ಗೊತ್ತಾಗಿತ್ತು. ಇದರೊಂದಿಗೆ ಸೈಯದ್ ಯಾಸಿನ್ ಮತ್ತು ಮುನೀರ್ ಅಹಮದ್​ ಕೂಡ ಉಗ್ರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದು ತನಿಖೆಯಲ್ಲಿ ಬಯಲಾಗಿತ್ತು. ಈ ಮೂವರೂ ಸೇರಿ ಶಿವಮೊಗ್ಗ ಜಿಲ್ಲೆಯ ತುಂಗಾ ನದಿಯ ದಡದಲ್ಲಿ ಸ್ಫೋಟದ ಪ್ರಯೋಗ ಮತ್ತು ಪೂರ್ವಾಭ್ಯಾಸ ನಡೆಸಿದ್ದರು ಎಂದು ತಿಳಿದು ಬಂದಿತ್ತು.

ಓಧಿ:ಕನ್ಯಾಕುಮಾರಿಯಲ್ಲಿ ಮಂಗಳೂರು ಬೋಟ್​ಗಳ ಮೇಲೆ ಕಲ್ಲು ತೂರಾಟ ಪ್ರಕರಣ: ಗಾಯಗೊಂಡ ಮೀನುಗಾರರಿಂದ ದೂರು

Last Updated : Feb 15, 2023, 10:01 AM IST

ABOUT THE AUTHOR

...view details