ನವದೆಹಲಿ:ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿರುವ ನೂತನ ಸಂಸತ್ ಭವನವು ಭಾನುವಾರ ಅದ್ಧೂರಿಯಾಗಿ ಉದ್ಘಾಟನೆಯಾಗಲಿದೆ. ಅದಕ್ಕೂ ಮುನ್ನ ಶನಿವಾರ ಮಧುರೈ ಅಧೀನಂನ 293ನೇ ಪ್ರಧಾನ ಅರ್ಚಕರು ಸಂಸತ್ ಭವನದಲ್ಲಿ ಇರಿಸಲು ನಿರ್ಧರಿಸಿರುವ ಸೆಂಗೋಲ್ (ರಾಜದಂಡ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರ ಮಾಡಿದರು.
ಚೆನ್ನೈನಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ಬಂದಿಳಿದ ತಿರುವವಾಡುತುರೈ ಅಧೀನಂ ದಾರ್ಶನಿಕರು, ಶನಿವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಲ್ಲದೇ ಹೆಮ್ಮೆಯ ಪ್ರತೀಕವಾಗಿರುವ ರಾಜದಂಡವನ್ನು ವಿಶೇಷ ಉಡುಗೊರೆಯಾಗಿ ನೀಡಿದರು. ಪ್ರಧಾನಿ ಮೋದಿ ಶ್ರೀಗಳು ನೀಡಿದ ರಾಜದಂಡವನ್ನು ಮನಪೂರ್ವಕ ಸ್ವೀಕರಿಸಿದರು.
ಭಾನುವಾರ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಸಂಸತ್ ಭವನದ ಸ್ಪೀಕರ್ ಆಸನದ ಬಳಿ ಐತಿಹಾಸಿಕ ಮತ್ತು ಪವಿತ್ರವಾದ ಈ ಸೆಂಗೋಲ್ ಅನ್ನು ಸ್ಥಾಪಿಸಲಿದ್ದಾರೆ. ರಾಜದಂಡ ಹಸ್ತಾಂತರಕ್ಕೂ ಮುನ್ನ ತಮ್ಮ ನಿವಾಸದಲ್ಲಿ ಅಧೀನರನ್ನು ಭೇಟಿಯಾದ ಪ್ರಧಾನಿ, ಶ್ರೀಗಳಿಂದ ಆಶೀರ್ವಾದ ಪಡೆದರು.
ರಾಜದಂಡ ಹಸ್ತಾಂತರದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ "ದೇಶ ಸ್ವಾತಂತ್ರ್ಯಗೊಂಡ ಬಳಿಕ ಪವಿತ್ರ ಈ ಸೆಂಗೋಲ್‌ಗೆ ಗೌರವ ಮತ್ತು ಗೌರವಾನ್ವಿತ ಸ್ಥಾನ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಹೆಮ್ಮೆಯ ಪ್ರತೀಕವಾಗಿರುವ ಈ ಸೆಂಗೋಲ್ ಅನ್ನು ಆನಂದ ಭವನದಲ್ಲಿ ವಾಕಿಂಗ್ ಸ್ಟಿಕ್ ರೀತಿ ಪ್ರದರ್ಶನಕ್ಕೆ ಇಡಲಾಗಿತ್ತು. ನಮ್ಮ ಸರ್ಕಾರವು ಈ ಸೆಂಗೋಲ್ ಅನ್ನು ಆನಂದ ಭವನದಿಂದ ಹೊರಗೆ ತಂದಿದೆ. ಭಾರತದ ಶ್ರೇಷ್ಠ ಸಂಪ್ರದಾಯದ ಪ್ರತೀಕವಾದ ಈ ಸೆಂಗೊಲ್ ಅನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವುದು ನನಗೆ ಸಂತಸ ತಂದಿದೆ. ಇಂದು ನೀವು ನನ್ನ ನಿವಾಸಕ್ಕೆ ಆಗಮಿಸಿರುವುದು ನನ್ನ ಜೀವನದ ಅದೃಷ್ಟ" ಎಂದು ತಮ್ಮ ನಿವಾಸಕ್ಕೆ ಆಗಮಿಸಿದ್ದ ಶ್ರೀಗಳನ್ನು ಗುಣಗಾನ ಮಾಡಿದರು.