ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟ ಗಗನಸಖಿ ಒಶಿನ್ ಅಲೆ ಮಗರ್ ತಮ್ಮ ಕುಟುಂಬಕ್ಕೆ ಮಾಡಿದ್ದ ವಾಗ್ದಾನ ಈಡೇರಿಸಲಾಗದೆಯೇ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಭಾರತದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಗಗನಸಖಿ ಒಶಿನ್ ಅಲೆ ಮಗರ್ ಅವರು ಕೆಲಸ ಮುಗಿಸಿ ಪೊಖರಾದಿಂದ ಮಾಘ ಸಂಕ್ರಾಂತಿ ಹಬ್ಬವನ್ನು ಆಚರಿಸಲು ಬರುವುದಾಗಿ ಕುಟುಂಬಕ್ಕೆ ಭರವಸೆ ನೀಡಿ ಭಾನುವಾರ ಮನೆಯಿಂದ ತೆರಳಿದ್ದರು. ಆದರೆ ಮರಳಿ ಬಂದದ್ದು ಮಾತ್ರ ಆಕೆಯ ಮೃತ ದೇಹ. ಐವರು ಭಾರತೀಯರು ಸೇರಿದಂತೆ 72 ಜನರಿದ್ದ ಯೇತಿ ಏರ್‌ಲೈನ್ಸ್‌ನ 9N-ANC ATR-72 ವಿಮಾನವು ಭಾನುವಾರ ಮಧ್ಯ ನೇಪಾಳದ ರೆಸಾರ್ಟ್ ನಗರವಾದ ಪೋಖಾರಾದಲ್ಲಿ ಸೇತಿ ನದಿಯ ದಡದಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಸಾವನ್ನಪ್ಪಿದ 69 ಜನರಲ್ಲಿ 24 ವರ್ಷದ ಓಶಿನ್ ಕೂಡ ಸೇರಿದ್ದಾರೆ.
ಆಕೆಯ ಕುಟುಂಬ ಮನೆಯಲ್ಲಿ ಹಬ್ಬ ಆಚರಿಸಲು ಸಿದ್ಧತೆ ನಡೆಸಿರುವಾಗಲೇ ವಿಮಾನ ದುರಂತದ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಹಬ್ಬದ ದಿನದಂದು ಕೆಲಸಕ್ಕೆ ಹೋಗಬೇಡ ಎಂದು ತಾವು ಮಗಳಿಗೆ ಮುಂಜಾನೆಯಷ್ಟೇ ಹೇಳಿದ್ದನ್ನು ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಆಕೆಯ ತಂದೆ ಮೋಹನ್ ಅಲೆ ಮಗರ್ ನೆನಪಿಸಿಕೊಳ್ಳುತ್ತಾರೆ. ಆ ದಿನದಂದು ಎರಡು ವಿಮಾನಗಳಲ್ಲಿ ಕೆಲಸ ಮಾಡಿದ ನಂತರವೇ ಹಬ್ಬ ಆಚರಿಸುವುದಾಗಿ ಆಕೆ ಹೇಳಿದ್ದಳು ಎಂದು ಮೋಹನ್ ಮಾಧ್ಯಮಗಳಿಗೆ ತಿಳಿಸಿದರು.
ಓಶಿನ್ ಎರಡು ವರ್ಷಗಳಿಂದ ಯೇತಿ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಚಿತ್ವಾನ್‌ನ ಮಡಿ ಮೂಲದವರು. ಉದ್ಯೋಗಕ್ಕೆ ಸೇರಿದ ನಂತರ ನಂತರ ಕಠ್ಮಂಡುವಿನಲ್ಲಿ ವಾಸಿಸುತ್ತಿದ್ದರು ಮತ್ತು ಕಳೆದ ಆರು ತಿಂಗಳಿನಿಂದ ಕಠ್ಮಂಡುವಿಗೆ ಬರುವಂತೆ ತನ್ನ ತಂದೆ ತಾಯಿಗೂ ಒತ್ತಾಯಿಸುತ್ತಿದ್ದರು. ಓಶಿನ್‌ಗೆ ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರ ಇದ್ದಾರೆ. ನಾಲ್ವರು ಒಡಹುಟ್ಟಿದವರಲ್ಲಿ ಇವಳೇ ಹಿರಿಯ ಮಗಳು. ಸಹೋದರನಿಗೆ ಕೇವಲ ನಾಲ್ಕು ವರ್ಷ. ತನ್ನ ಸಹೋದರ ಮತ್ತು ಸಹೋದರಿಯರನ್ನು ಶಿಕ್ಷಣಕ್ಕಾಗಿ ಕಠ್ಮಂಡುವಿಗೆ ಕರೆದೊಕೊಂಡು ಬಂದಿದ್ದಳು.