ಸುಕ್ಮಾ (ಛತ್ತೀಸ್‌ಗಢ):ಇಂದು ಬೆಳಗ್ಗೆ ಇಲ್ಲಿನ ಭೇಸಾಯಿ ಪ್ರದೇಶದಲ್ಲಿ ಜಿಲ್ಲಾ ಮೀಸಲು ಗಾರ್ಡ್‌ಗಳ (ಡಿಆರ್‌ಜಿ) ಪಡೆ ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಮಾವೋವಾದಿಗಳ ಹುಡುಕಾಟದ ವೇಳೆ ಡಿಆರ್‌ಜಿ ಮೇಲೆ ನಕ್ಸಲೀಯರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿದಾಳಿ ನಡೆಸಿದ ಡಿಆರ್‌ಜಿ ಇಬ್ಬರು ಮಾವೋವಾದಿಗಳನ್ನು ಹೊಡೆದುರುಳಿಸಿದೆ.
ನಕ್ಸಲಿಯರ ಹತ್ಯೆಯನ್ನು ಸುಕ್ಮಾ ಎಸ್ಪಿ ಸುನಿಲ್ ಶರ್ಮಾ ಖಚಿತಪಡಿಸಿದ್ದು, ಘಟನೆ ಬಗ್ಗೆ ವಿವರ ನೀಡಿದ್ದಾರೆ. ಜಿಲ್ಲೆಯ ಧನ್ತೇರಸ್ ಪುರಂ ಅರಣ್ಯದಲ್ಲಿ ಗೊಲ್ಲಪಲ್ಲಿ ಎಲ್ಒಎಸ್ (ನಕ್ಸಲ್) ಕಮಾಂಡರ್ ಮಡ್ಕಂ ಎರ್ರಾ ಮತ್ತು ಇತರ ನಕ್ಸಲೀಯರು ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಡಿಆರ್‌ಜಿ, ಕೋಬ್ರಾ, ಸಿಆರ್ಪಿಎಫ್ ಪಡೆಗಳ ಜಂಟಿ ಕಾರ್ಯಾಚರಣೆ ಆರಂಭಿಸಿದ್ದವು. ನಕ್ಸಲಿಯರಿರುವ ಪ್ರದೇಶದಲ್ಲಿ ಹುಡುಕಾಟ ಮಾಡಿದ್ದು, ಯಾರೊಬ್ಬರೂ ಪತ್ತೆಯಾಗಿರಲಿಲ್ಲ. ನಂತರ ಕಾರ್ಯಾಚರಣೆ ಮುಗಿಸಿ ಈ ಪಡೆಗಳು ಹಿಂತಿರುಗುತ್ತಿದ್ದಾಗ ನಕ್ಸಲೀಯರು ಡಿಆರ್‌ಜಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಡಿಆರ್‌ಜಿ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಡಿಆರ್‌ಜಿ ಯೋಧರ ದಾಳಿಗೆ ಇಬ್ಬರು ನಕ್ಸಲಿಯರು ಹತ್ಯೆಯಾಗುತ್ತಿದ್ದಂತೆ ಉಳಿದವರು ದಟ್ಟ ಅರಣ್ಯದದಲ್ಲಿ ಪರಾರಿಯಾಗಿದ್ದಾರೆ. ಯೋಧರಿಂದ ಹತರಾದ ನಕ್ಸಲೀಯರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ನಕ್ಸಲ್ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಉಳಿದವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.