ಸಾಗರ್ (ಮಧ್ಯಪ್ರದೇಶ): ಜಿಲ್ಲೆಯ ಧನಾ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ಪೈಲಟ್ ಚಾಲನೆ ಮಾಡುತ್ತಿದ್ದ ಲಘು ವಿಮಾನವೊಂದು ಶನಿವಾರ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಪೈಲಟ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಚೈಮ್ಸ್ ಏವಿಯೇಷನ್ಗೆ ಸೇರಿದ ಸೆಸ್ನಾ 172 ಹೆಸರಿನ ವಿಮಾನವು ಅಪಘಾತಕ್ಕೀಡಾದ ವಿಮಾನವಾಗಿದೆ.
ಕಳೆದ ವರ್ಷ ಇದೇ ಸಂಸ್ಥೆಯ ವಿಮಾನವು ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದರು. ನಂತರ ಇಲ್ಲಿಂದ 20 ಕಿಲೋ ಮೀಟರ್ ದೂರದಲ್ಲಿರುವ ಏರ್ಸ್ಟ್ರಿಪ್ ಬಳಸುವುದನ್ನು ನಿಷೇಧಿಸಲಾಗಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಆ ನಿರ್ಬಂಧವನ್ನು ತೆಗೆದುಹಾಕಿ ಇಲ್ಲಿ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, 22 ವರ್ಷದ ಟ್ರೈನಿಂಗ್ ಪೈಲಟ್ ಸುರಕ್ಷಿತ ಎಂದು ಸ್ಥಳೀಯ ಆಡಳಿತಾಧಿಕಾರಿ ರಾಹುಲ್ ಶರ್ಮಾ ತಿಳಿಸಿದ್ದಾರೆ.