ಹೈದರಾಬಾದ್ (ತೆಲಂಗಾಣ):ಸದ್ಯದ ರಾಜಕೀಯದಲ್ಲಿ ಎರಡು ಹೆಸರುಗಳು ಮಾತ್ರ ವೇಗವಾಗಿ ಸಂಚರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮೊದಲಾದರೆ, ಆ ನಂತರದ್ದು ಗೃಹ ಸಚಿವ ಅಮಿತ್ ಶಾ. ಇಬ್ಬರ ಜುಗಲ್ಬಂಧಿ ಅದಷ್ಟೋ ಚುನಾವಣೆಗಳನ್ನು ಗೆದ್ದಿದೆ. ಇದೀಗ ಇಬ್ಬರ ಚಿತ್ತ ದಕ್ಷಿಣ ಭಾರತದತ್ತ ನೆಟ್ಟಿದೆ. ಕರ್ನಾಟಕ ವಿಧಾನಸಭೆಗೆ ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿದೆ. ಪಕ್ಕದ ರಾಜ್ಯ ತೆಲಂಗಾಣ ವಿಧಾನಸಭೆಗೆ ವರ್ಷಾಂತ್ಯದಲ್ಲಿ ವೋಟ್ ಲೆಕ್ಕ ನಡೆಯಲಿದೆ. ಇದು ಇಬ್ಬರೂ ನಾಯಕರು ದಕ್ಷಿಣ ಭಾರತದ ದಂಡಯಾತ್ರೆಗೆ ಹಾದಿ ಒದಗಿಸಿದೆ.
ಈಗಾಗಲೇ ಕರ್ನಾಟಕದಲ್ಲಿ ಹಲವು ರ್ಯಾಲಿಗಳನ್ನು ನಡೆಸಿರುವ ಉಭಯ ನಾಯಕರು ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆಯನ್ನು ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಕಠಿಣ ಪ್ರತಿಸ್ಪರ್ಧಿಯಾಗಿರುವ ಕಾರಣ ಮೋದಿ-ಶಾ ಜೋಡಿ ಚುರುಕಾಗಿ ಓಡಾಡುತ್ತಿದೆ. ಇಂದು ಪ್ರಧಾನಿ ಮೋದಿ ಅವರು ರಾಜ್ಯದ ಮಂಡ್ಯ, ಹುಬ್ಬಳ್ಳಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರೆ, ಅಮಿತ್ ಶಾ ತೆಲಂಗಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.
ಕಾರ್ಯಕರ್ತರ ವಿಶ್ವಾಸ ವೃದ್ಧಿ:ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಚುನಾವಣಾ ಪೂರ್ವ ಸಿದ್ಧತೆ ನಡೆಸುತ್ತಿರುವ ಮೋದಿ- ಅಮಿತ್ ಶಾ ಜೋಡಿ, ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಭೇಟಿ ಮಾಡಿ ಹುರಿದುಂಬಿಸುತ್ತಿದ್ದಾರೆ. ವರ್ಚಸ್ವಿ ನಾಯಕರ ಭೇಟಿಯಿಂದ ಕಾರ್ಯಕರ್ತರಲ್ಲಿಯೂ ಆತ್ಮವಿಶ್ವಾಸ ಇಮ್ಮಡಿಯಾಗುತ್ತಿದೆ.
ಈಶಾನ್ಯ ರಾಜ್ಯಗಳು ಮತ್ತು ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಾಧಿಸಿದ ಜಯ ಬೂಸ್ಟರ್ ನೀಡಿದೆ. ದಕ್ಷಿಣದಲ್ಲಿಯೂ ಇದೇ ತಂತ್ರವನ್ನು ಪುನರಾವರ್ತಿಸುವ ಗುರಿಯನ್ನು ಮೋದಿ- ಅಮಿತ್ ಶಾ ನಿಸ್ಸಂಶಯವಾಗಿ ಹೊಂದಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಂದಾಜು. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕೇಸರಿ ಪಡೆಗೆ ಚುನಾವಣೆಯಲ್ಲಿ ಕಠಿಣ ಪರೀಕ್ಷೆ ಎದುರಾಗುವುದು ಪಕ್ಕಾ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ನಂತರ, ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಓಡಾಡುತ್ತಿದ್ದಾರೆ.
ಕಾಂಗ್ರೆಸ್ ಮಾಡು ಇಲ್ಲವೇ ಮಡಿ ಫೈಟ್:ಕರ್ನಾಟಕದಲ್ಲಿ ಇದರ ಭಾಗವಾಗಿ ಪಕ್ಷದ ಚಟುವಟಿಕೆ ತುಸು ಹೆಚ್ಚೇ ಇದೆ. ತೆಲಂಗಾಣದಲ್ಲಿ ಬಿಆರ್ಎಸ್ ಪಕ್ಷ ಅಧಿಕಾರ ನಡೆಸುತ್ತಿದ್ದು, ಅದನ್ನೂ ಕಿತ್ತೊಗೆಯುವ ತಂತ್ರ ನಡೆಸುತ್ತಿದೆ. ಕಾಂಗ್ರೆಸ್ ಪಾಲಿಗೆ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈಗಾಗಲೇ, 2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದರಿಂದ ದೇಶದ ಹಳೆಯ ಪಕ್ಷ ಧೂಳೀಪಟವಾಗಿತ್ತು.