ನವದೆಹಲಿ: ಮೊದಲ ಬಾರಿಗೆ ಜಿ-20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಂಡಿರುವ ಬಳಿಕ ಸೋಮವಾರ ದೇಶದ ಸರ್ವ ಪಕ್ಷಗಳ ಸಭೆ ನಡೆಸಿರುವ ಮೋದಿ, 2023ನೇ ಸಾಲಿನ ಶೃಂಗಸಭೆಯ ಅಧ್ಯಕ್ಷತೆ ದೊರೆತಿರುವುದು ಭಾರತಕ್ಕೆ ಸಂದ ಗೌರವ, ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಅಲ್ಲ. ಭಾರತ ಅಧ್ಯಕ್ಷತೆಯ ಜಿ -20 ಶೃಂಗಸಭೆಯನ್ನು ಯಶಸ್ವಿಯಾಗಿಸುವಲ್ಲಿ ಎಲ್ಲಾ ಪಕ್ಷಗಳು ಸಹಕರಿಸಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಇಂಡೋನೇಷ್ಯಾದ ಸಾರಥ್ಯದಲ್ಲಿದ್ದ ಜಿ 20 ಅಧ್ಯಕ್ಷ ಸ್ಥಾನವನ್ನು ಡಿ. 1 ರಂದು ಭಾರತ ವಹಿಸಿಕೊಂಡಿದೆ. 2023ರ ನ. 20ರವರೆಗೆ ಇದರ ಅಧಿಕಾರಾವಧಿ ಮುಂದುವರಿಯಲಿದ್ದು, ಮುಂದಿನ ವರ್ಷ ಸೆಪ್ಟೆಂಬರ್ನಲ್ಲಿ ನವದೆಹಲಿಯಲ್ಲಿ ಜಿ-20 ಶೃಂಗಸಭೆ ಜರುಗಲಿದೆ.
ಹಾಲಿ- ಮಾಜಿ ಪ್ರಧಾನಿಗಳ ಸಂಭಾಷಣೆ: ಸರ್ವಪಕ್ಷಗಳ ಸಭೆ ಸಮಯದಲ್ಲಿ ಪ್ರಧಾನಿ ಮೋದಿ ವಿರೋಧ ಪಕ್ಷಗಳ ನಾಯಕರ ಜೊತೆ ಟೀ ಸವಿದು ಕುಶಲೋಪರಿ ಮಾತನಾಡಿರುವುದು ವಿಶೇಷವಾಗಿತ್ತು. ಅದರಲ್ಲೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಮೋದಿ ಅವರ ಕೈ ಹಿಡಿದು ಮಾತನಾಡುತ್ತಿರುವ ಫೋಟೋ ಗಮನ ಸೆಳೆದಿದೆ. ಈ ವೇಳೆ ಮಾಜಿ ಪ್ರಧಾನಿ ಹಾಲಿ ಪ್ರಧಾನಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಮಾಜಿ ಪ್ರಧಾನಿ ಹೆಚ್ಡಿಕೆ ಸಲಹೆ: ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ನಂತರ ತಾವು ನಿಡಿದ ಸಲಹೆಗಳ ಕುರಿತು ಇಂದು ಮಾಜಿ ಪ್ರಧಾನಿ ದೇವೇಗೌಡ ಟ್ವೀಟ್ ಮಾಡಿದ್ದಾರೆ. ಜಿ- 20 ಅಧ್ಯಕ್ಷತೆ ಭಾರತಕ್ಕೆ ಸಿಕ್ಕಿರುವುದಕ್ಕೆ ನಾನು ಮೊದಲು ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಶ್ವದ ಆರ್ಥಿಕತೆ, ತಾಂತ್ರಿಕತೆ, ತಂತ್ರಜ್ಞಾನ, ವಿಜ್ಞಾನ, ಸಾಮಾಜಿಕ ಮತ್ತು ಪರಿಸರ ವೇದಿಕೆಗಳಿಗೆ ಕೊಡುಗೆ ನೀಡಲು ನಮ್ಮಲ್ಲಿ ಸಾಕಷ್ಟಿವೆ ಎಂದು ಭಾವಿಸುತ್ತಿರುವ ಈ ಸಮಯದಲ್ಲೇ ನಮಗೆ ಈ ಜಿ 20 ಶೃಂಗಸಭೆ ಅಧ್ಯಕ್ಷತೆ ದೊರೆತಿರುವುದು ಭಾರತದ ಜೀವಮಾನದಲ್ಲಿ ಗಮನಾರ್ಹವಾಗಿದೆ. ನಮ್ಮದು ಯುವ ಭಾರತ. ಈ ಅಧ್ಯಕ್ಷತೆ ನಮ್ಮ ಕ್ರಿಯಾತ್ಮಕತೆ ಮತ್ತು ಶಕ್ತಿಯಯನ್ನು ನಿರೂಪಿಸಲು ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ನನ್ನಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಆರ್ಥಿಕಾಭಿವೃದ್ಧಿ ಮಾತ್ರವಲ್ಲ ವಿಶ್ವಕ್ಕೆ ಪ್ರಸ್ತುತ ಅಗತ್ಯವಿರುವ ಸಾಮಾಜಿಕ, ಆಧ್ಯಾತ್ಮಿಕ ಮತ್ತು ಪರಿಸರ ಅಭಿವೃದ್ಧಿಯ ಕುರಿತು ಪ್ರಧಾನಿ ಮಾತನಾಡಿದ್ದಾರೆ. ಪರಸ್ಪರ ದೇಶಗಳನ್ನು ಮತ್ತಷ್ಟು ಸಹಕಾರ ಮತ್ತು ಹತ್ತಿರವಾಗಿಸುವ ಕ್ರಮಗಳು ಸ್ವಾಗತಾರ್ಹ. ರಷ್ಯಾ ಮತ್ತು ಉಕ್ರೇನ್ ಯುದ್ಧ ಸಂದರ್ಭದಲ್ಲಿ ಶಾಂತಿಪಾಲನೆಗಾಗಿ ಪ್ರಧಾನಿಯವರ ಪ್ರಯತ್ನಗಳನ್ನು ನಾನು ಮೆಚ್ಚುತ್ತೇನೆ. ಇದು ಯುದ್ಧದ ಕಾಲವಲ್ಲ ಎಂಬ ಪ್ರಧಾನಿ ಅಭಿಪ್ರಾಯ ನಿಜವಾಗಿಯೂ ಗಮನಾರ್ಹವಾಗಿದೆ. ಜಿ20 ಅಧ್ಯಕ್ಷೀಯ ಅವಧಿಯಲ್ಲಿ ಉತ್ತಮ ನಿರ್ಧಾರಗಳು ಹೊರಬೀಳಲಿ ಎಂದು ದೇವೇಗೌಡರು ಹಾರೈಸಿದ್ದಾರೆ.