ನವದೆಹಲಿ:ಬಿಜೆಪಿ ನೇತೃತ್ವದ ಎನ್‌ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ವಿರುದ್ಧ ಸೆಣಸಲು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಹೊಸದಾಗಿ I.N.D.I.A ಕೂಟ ರಚಿಸಿಕೊಂಡಿವೆ. ಭರ್ಜರಿ ತಯಾರಿಯಲ್ಲಿರುವ ಆಡಳಿತ- ಪ್ರತಿಪಕ್ಷಗಳು 2024ರ ಲೋಕಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನೀಡುವುದು ಈಗಲೇ ಗೋಚರಿಸುತ್ತಿದೆ.
ಇಂಡಿಯಾ ಕೂಟದ ಮೇಲೆ ಬಿಜೆಪಿ ಮಿತ್ರಕೂಟ 2014ರಂತೆಯೇ ಪರಿಣಾಮ ಬೀರುತ್ತದೆಯೇ? ಅಥವಾ I.N.D.I.A ಬಣವು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ಮೀರಿಸಲಿದೆಯೇ ಎಂಬಬ ಪ್ರಶ್ನೆಗಳಿಗೆ 'ಮೋದಿ ಆ್ಯಂಡ್ ಇಂಡಿಯಾ: 2024 ಆ್ಯಂಡ್ ಬ್ಯಾಟಲ್ ಫಾರ್ ಇಂಡಿಯಾ' ಪುಸ್ತಕ ಉತ್ತರಿಸುವ ಪ್ರಯತ್ನ ಮಾಡಿದೆ.
ಪತ್ರಕರ್ತ ಮತ್ತು ಲೇಖಕ ರಾಹುಲ್ ಶಿವಶಂಕರ್ ಮತ್ತು ಸಿದ್ಧಾರ್ಥ ತಾಳ್ಯ ಅವರು ಬರೆದಿರುವ, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿರುವ ಈ ಪುಸ್ತಕ ನವೆಂಬರ್ 6 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಮುಂದಿನ ಲೋಕಸಭೆ ಚುನಾವಣೆಯ ಚಿತ್ರಣವನ್ನು ವಿವರಿಸಲಾಗಿದೆ.
ಪುಸ್ತಕದಲ್ಲಿರುವ ವಿಚಾರಗಳೇನು?:2014 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಗಳಿಸಿತು. ಎನ್‌ಡಿಎ ವಿಜಯೋತ್ಸವವು ಸುಮಾರು ಎರಡೂವರೆ ದಶಕಗಳ ಯುಪಿಎ ಕೂಟದ ಸಮ್ಮಿಶ್ರ ಸರ್ಕಾರದ ಅಧಿಕಾರವನ್ನು ಕೊನೆಗೊಳಿಸಿತು. ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು.
2019 ರ ಚುನಾವಣೆಯಲ್ಲೂ ಏಕಮೇವವಾಗಿ ಯುಪಿಎ ಬಣವನ್ನು ಬಗ್ಗುಬಡಿದ ಬಿಜೆಪಿ ನೇತೃತ್ವದ ಎನ್‌ಡಿಎ ಎರಡನೇ ಸಲ ಭರ್ಜರಿಯಾಗಿ ಗೆಲುವು ಸಾಧಿಸಿತು. ವಿಶೇಷವೆಂದರೆ ಬಿಜೆಪಿ ತನ್ನ ಸಂಸತ್ ಸ್ಥಾನಗಳಲ್ಲೂ ಏರಿಕೆ ಕಂಡ ಏಕಪಕ್ಷವಾಗಿ ಅಧಿಕಾರದ ಗದ್ದುಗೆ ಏರಿತು. ಹಿಂದಿನ ಸರ್ಕಾರದ ಪರಿವರ್ತನಾ ಕಾನೂನುಗಳು ಮತ್ತು ನೀತಿಗಳಿಂದ ಯಶಸ್ಸು ಸಾಧಿಸಿತ್ತು. ಲೇಖಕರ ಪ್ರಕಾರ, ಪ್ರಧಾನಿ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳು ಮತ್ತು ಭಾರತ 'ವಿಶ್ವ ಗುರು' ಘೋಷಣೆ ದಿಗ್ವಿಜಯಕ್ಕೆ ಕಾರಣವಾಯಿತು ಎಂದಿದ್ದಾರೆ.
ಹಿಂದು ರಾಷ್ಟ್ರ ಘೋಷಣೆಯ ಪರಿಣಾಮವೇನು?:ಬಿಜೆಪಿಯ ಹಿಂದು ಪರ ನೀತಿಯು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಘೋಷಣೆ ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿರುವ ಭೀತಿಯು ಮುಂದಿನ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಲಿದೆ ಎಂಬುದನ್ನೂ ಈ ಪುಸ್ತಕ ವಿವರಿಸಿದೆ. ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ಪಡೆಯಲಿದ್ದಾರಾ ಮತ್ತು ನವ ಭಾರತದ ಉದಯಕ್ಕೆ ಮುಂದಾಗುತ್ತಾರೆಯೇ ಎಂಬುದನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
2024 ರ ಲೋಕಸಭೆ ಚುನಾವಣೆಯನ್ನೇ ಕೇಂದ್ರೀಕರಿಸಿಕೊಂಡಿರುವ ಅತ್ಯಂತ ಪ್ರಮುಖ ಪ್ರಶ್ನೆಗಳಿಗೆ ಪುಸ್ತಕವು ಸಂಶೋಧನಾತ್ಮಕವಾಗಿ ಉತ್ತರಿಸಲು ಪ್ರಯತ್ನಿಸಿದೆ. ಪ್ರಮುಖವಾಗಿ, ಬಿಜೆಪಿಯ 'ಹಿಂದು ಭಾರತ' ಮರುಸ್ಥಾಪನೆ ಆರೋಪದ ಬಗ್ಗೆ I.N.D.I.A ಕೂಟದ ಭೀತಿ ತಪ್ಪಾಗಿದೆಯೇ? ಅಥವಾ ಮೋದಿಯವರ 'ಭಾರತ' ಕಲ್ಪನೆಯು ಸಾಂವಿಧಾನಿಕವೇ, ಸಮರ್ಥನೀಯವೇ? ಎಂದು ಲೇಖಕ ಶಿವಶಂಕರ್ ಪುಸ್ತಕದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:ಭಾರತ ಪ್ಯಾಲೆಸ್ಟೈನ್ ಪರವಾಗಿ ನಿಲ್ಲಲಿ: ಪ್ರಧಾನಿ ಮೋದಿಗೆ ಒವೈಸಿ ಒತ್ತಾಯ