ಕೋಟಾ (ರಾಜಸ್ಥಾನ):10ನೇ ತರಗತಿಯ ಪರೀಕ್ಷೆ ಮುಗಿಸಿ ಪ್ರವಾಸಕ್ಕೆ ತೆರಳಿದ್ದ ಮಧ್ಯಪ್ರದೇಶದ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಎರಡು ಬಾರಿ ವಧುವಿನಂತೆ ಮಾರಾಟ ಮಾಡಲಾಗಿದೆ ಎಂದು ಇಲ್ಲಿನ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು. ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಮನೆಯೊಂದರಲ್ಲಿ ತಿಂಗಳುಗಟ್ಟಲೆ ಕೂಡಿ ಹಾಕಲಾಗಿತ್ತು. ಆಗ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸ್ವಲ್ಪ ಸಮಯದ ನಂತರ, ಕೋಟಾದಲ್ಲಿ ರೈಲ್ವೆ ಪೊಲೀಸರಿಗೆ ಆಕೆ ಸಿಕ್ಕಿದ್ದಾಳೆ ಎಂದು ಸಿಡಬ್ಲ್ಯುಸಿ ಅಧ್ಯಕ್ಷೆ ಕನೀಜ್ ಫಾತಿಮಾ ಮಾಹಿತಿ ನೀಡಿದರು.
ಏನಿದು ಪ್ರಕರಣ?:''ಐದು ತಿಂಗಳ ಹಿಂದೆ ಮಧ್ಯಪ್ರದೇಶದ ಕಟ್ನಿಯಲ್ಲಿರುವ ತನ್ನ ಮನೆಯಿಂದ 10 ನೇ ತರಗತಿ ಪರೀಕ್ಷೆಯನ್ನು ನೀಡಿದ ನಂತರ ಪ್ರವಾಸಕ್ಕೆಂದು ಹೊರಟಿದ್ದ ವೇಳೆ ಬಾಲಕಿಗೆ ತೀವ್ರ ತೊಂದರೆ ಎದುರಾಯಿತು. ಬಾಲಕಿ ಕಟ್ನಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ, ಕೆಲವು ಯುವಕರು ಅವಳೊಂದಿಗೆ ಜೊತೆಗೆ ಸ್ನೇಹ ಬೆಳೆಸಿದರು. ಹತ್ತಿರದ ಉದ್ಯಾನವನಕ್ಕೆ ಕರೆದೊಯ್ದರು. ಅಲ್ಲಿ ಅವರು ಆಕೆಗೆ ಆಹಾರ ಮತ್ತು ಪಾನೀಯವನ್ನು ನೀಡಿದರು. ಅದನ್ನು ಸೇವಿಸಿದ ನಂತರ ಬಾಲಕಿ ಪ್ರಜ್ಞಾಹೀನಳಾದಳು. ಬಾಲಕಿಗೆ ಪ್ರಜ್ಞೆ ಬಂದಾಗ, ಉಜ್ಜಯಿನಿಯ ಹೋಟೆಲ್ ಕೊಠಡಿಯಲ್ಲಿ ಇಬ್ಬರು ಪುರುಷರು ಮತ್ತು ಮಹಿಳೆ ಕಾಣಿಸಿಕೊಂಡಿದ್ದರು'' ಎಂದು ಕನೀಜ್ ಫಾತಿಮಾ ಹೇಳಿದರು.
ಬಾಲಕಿಯನ್ನು ಎರಡು ಬಾರಿ ಮಾರಾಟ ಮಾಡಿದ ದುರುಳರು: ''ಅವರು ತನಗೆ ಬೆದರಿಕೆ ಹಾಕಿದರು. 27 ವರ್ಷದ ಯುವಕನನ್ನು ಮದುವೆಯಾಗುವಂತೆ ಒತ್ತಾಯಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ. ಮದುವೆಯಾದ ನಂತರ ಆ ವ್ಯಕ್ತಿಯು, ನಾನು ನಿನ್ನನ್ನು 2 ಲಕ್ಷ ರೂ.ಗೆ ಖರೀದಿಸಿರುವುದಾಗಿ ಬಾಲಕಿಗೆ ತಿಳಿಸಿದ್ದಾನೆ'' ಎಂದು ಕನೀಜ್ ಫಾತಿಮಾ ಹೇಳಿದ್ದಾರೆ.