ಕರ್ನಾಟಕ

karnataka

ETV Bharat / bharat

Taj Mahal: ಅಲ್ಲಿರುವುದು ಪ್ರೀತಿಯ ಸ್ಮಾರಕ, ಇಲ್ಲಿರುವುದು ಅಮ್ಮನ ದ್ಯೋತಕ: ತಮಿಳುನಾಡಿನಲ್ಲೊಂದು ಮಿನಿ ತಾಜ್​ಮಹಲ್!

ತಮಿಳುನಾಡಿನ ಉದ್ಯಮಿಯೊಬ್ಬ ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ಮಿನಿ ತಾಜ್​ಮಹಲ್​ ಕಟ್ಟಿಸಿದ್ದಾರೆ. ಇದಕ್ಕಾಗಿ 5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಅಮೃತಶಿಲೆಯಲ್ಲಿಯೇ ನಿರ್ಮಾಣವಾಗಿರುವುದು ವಿಶೇಷ.

By

Published : Jun 11, 2023, 1:07 PM IST

Updated : Jun 12, 2023, 4:51 PM IST

ಮಿಳುನಾಡಿನಲ್ಲೊಂದು ಮಿನಿ ತಾಜ್​ಮಹಲ್
ಮಿಳುನಾಡಿನಲ್ಲೊಂದು ಮಿನಿ ತಾಜ್​ಮಹಲ್

ಚೆನ್ನೈ(ತಮಿಳುನಾಡು):ಪ್ರೀತಿಯ ಸ್ಮಾರಕ ತಾಜ್​ಮಹಲ್​. ಇದನ್ನು ಅದೆಷ್ಟೋ ಪ್ರೇಮಿಗಳು ಆದರ್ಶವಾಗಿ ಪರಿಗಣಿಸುತ್ತಾರೆ. ಅಮೃತಶಿಲೆಯಲ್ಲಿ ಮೈದಾಳಿರುವ ಈ ಭವ್ಯ ಕಟ್ಟಡವನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ವರ್ಷವುದ್ದಕ್ಕೂ ಇಲ್ಲಿಗೆ ಎಡತಾಕುತ್ತಾರೆ. ಅದರ ಪ್ರತಿರೂಪದಂತಿರುವ ಮಿನಿ ತಾಜ್​ಮಹಲ್​ ದಕ್ಷಿಣ ಭಾರತದಲ್ಲೂ ಇದೆ ಎಂಬುದು ಯಾರಿಗೂ ಗೊತ್ತಿರದ ಸುಪ್ತ ವಿಷಯ. ಉತ್ತರ ಭಾರತದಲ್ಲಿರುವ ಆ ಸ್ಮಾರಕ ಪ್ರೇಯಸಿಯ ಪ್ರೀತಿಗೆ ದ್ಯೋತಕವಾಗಿದ್ದರೆ, ಇಲ್ಲಿರುವ ಈ ಸ್ಮಾರಕ ಹೆತ್ತಮ್ಮನ ಪ್ರೀತಿಯ ಸಂಕೇತವಾಗಿದೆ.

ನಿಜ! ಅಂದು(1631 ರಲ್ಲಿ) ಆಗ್ರಾದ ಯಮುನಾ ನದಿಯ ಮೇಲೆ ಮೊಘಲ್​ ಸಾಮ್ರಾಟ ಷಹಜಹಾನ್​ ತನ್ನ ನೆಚ್ಚಿನ ಪತ್ನಿ ಮುಮ್ತಾಜ್​ಗಾಗಿ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲ್​ ಅನ್ನು ಕಟ್ಟಿಸಿದ್ದರು. ಅದೇ ತೆರನಾಗಿ ತಮಿಳುನಾಡಿನ ತಿರುವಾರೂರಿನಲ್ಲಿ ಉದ್ಯಮಿಯೊಬ್ಬರು ಅವರ ತಾಯಿಯ ನೆನಪಿಗಾಗಿ ಅಮೃತಶಿಲೆಗಳಲ್ಲಿ ಭವ್ಯ ಕಟ್ಟಡ ನಿರ್ಮಿಸಿದ್ದಾರೆ. ಇದು ದಕ್ಷಿಣ ಭಾರತದ ತಾಜ್​ಮಹಲ್​ ಎಂದರೆ ತಪ್ಪಾಗಲಿಕ್ಕಿಲ್ಲ.

ಏನಿದರ ಹಿನ್ನೆಲೆ?:ಉದ್ಯಮಿ ಅಮರುದ್ದೀನ್​ ಎಂಬುವರು ಇದರ ನಿರ್ಮಾತೃ. ತಾಯಿ ಜೈಲಾನಿ ಬೀವಿ ಅವರ ಮೇಲಿನ ಅಗಾಧ ಪ್ರೇಮ ಈ ಶಿಲಾಮೃತ ಕಟ್ಟಡ ಮೈದಾಳುವಂತೆ ಮಾಡಿದ್ದಾರೆ. ತಾಜ್​ಮಹಲ್​ ಮಾದರಿಯನ್ನು ತಮ್ಮ ಹುಟ್ಟೂರಾದ ತಿರುವಾರೂರಿ ಜಿಲ್ಲೆಯ ಅಮ್ಮಯ್ಯಪ್ಪನ್‌ ಗ್ರಾಮದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇಷ್ಟು ದಿನ ಯಾರಿಗೂ ಗೊತ್ತಿರದ ಪ್ರೀತಿಯ ದ್ಯೋತಕದ ಕಟ್ಟಡ, ಇದೀಗ ರಾಜ್ಯದ ಜನರ ಮನೆ ಮಾತಾಗಿದೆ.

ಉದ್ಯಮಿ ಅಮರುದ್ದೀನ್ ಅವರ ತಂದೆ ಅಮೃತೀನ್ ಶೇಕ್ ದಾವೂದ್ ಸಾಹಿಬ್ ಅವರು ಚೆನ್ನೈನಲ್ಲಿ ಹಾರ್ಡ್‌ವೇರ್ ಉದ್ಯಮಿಯಾಗಿದ್ದರು. ಐದು ಮಕ್ಕಳ ಪೈಕಿ ಅಮರುದ್ದೀನ್​ ಏಕೈಕ ಸುಪುತ್ರ. ಚರ್ಮದ ವ್ಯಾಪಾರಿಯಾಗಿದ್ದ ಅಮೃತೀನ್ ಶೇಕ್ ಅವರು ತಮ್ಮ ಮಕ್ಕಳು ಚಿಕ್ಕವರಿದ್ದಾಗಲೇ ಕಣ್ಮುಚ್ಚಿದ್ದರು. ಇದು ಕುಟುಂಬವನ್ನು ದಿಕ್ಕೆಡಿಸಿತ್ತು.

ಐದು ಚಿಕ್ಕ ಮಕ್ಕಳನ್ನು ತಾಯಿ ಜೈಲಾನಿ ಬೀವಿ ಅವರು ಬೆಳೆಸಲು ಇನ್ನಿಲ್ಲದ ಕಷ್ಟಪಟ್ಟರು. ಪತಿಯ ವ್ಯಾಪಾರವನ್ನು ಮುಂದುವರಿಸಿಕೊಂಡು ಹೋದ ಅವರು, ಪುತ್ರ, ನಾಲ್ವರು ಪುತ್ರಿಯರೊಂದಿಗೆ ಬದುಕು ಕಟ್ಟಿಕೊಂಡರು. ಎಲ್ಲ ಪುತ್ರಿಯರಿಗೆ ಮದುವೆ ಮಾಡಿಸಿಕೊಟ್ಟರು. ಪುತ್ರ ಅಮರುದ್ದೀನ್ ತಾಯಿಯ ಜೊತೆಗೆ ನಿಂತು ವ್ಯಾಪಾರ ನಿಭಾಯಿಸುತ್ತಿದ್ದ.

2020ರಲ್ಲಿ ತಾಯಿ ಜೈಲಾನಿ ಬೀವಿ ಅವರು ನಿಧನರಾದರು. ಇದು ಅಮರುದ್ದೀನ್‌ಗೆ ದೊಡ್ಡ ಆಘಾತ ನೀಡಿತ್ತು. ತಾಯಿಯೇ ಸರ್ವಸ್ವವಾಗಿದ್ದ ಈತನಿಗೆ ಅವರ ಕಣ್ಮರೆ ಕಾಡುತ್ತಿತ್ತು. ಜೈಲಾನಿ ಬೀವಿ ಅವರು ಅಮಾವಾಸ್ಯೆಯ ದಿನದಂದು ಅಸುನೀಗಿದ್ದರು. ಪುತ್ರ ಅಮರುದ್ದೀನ್ ಪ್ರತಿ ಅಮಾವಾಸ್ಯೆಯಂದು 1,000 ಜನರಿಗೆ ಬಿರಿಯಾನಿಯೊಂದಿಗೆ ಔತಣ ನೀಡುತ್ತಿದ್ದರು.

ಒಂದು ಎಕರೆಯಲ್ಲಿ ನಿರ್ಮಾಣ:ಆದರೆ, ಇದ್ಯಾಕೋ ಆತನಿಗೆ ಸಾಲುತ್ತಿಲ್ಲ ಅನ್ನಿಸಿತು. ನಂತರ ತನ್ನ ತಾಯಿಯ ನೆನಪಿಗಾಗಿ ಮಿನಿ ತಾಜ್ ಮಹಲ್ ನಿರ್ಮಿಸುವ ಆಲೋಚನೆ ಮಾಡಿದರು. ಇದಕ್ಕಾಗಿ ತಮ್ಮ ಪೂರ್ವಜರ ಹಳ್ಳಿಯಾದ ಅಮ್ಮಯ್ಯಪ್ಪನ್‌ನಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸಿದರು. ಬಿಲ್ಡರ್ ಆಗಿದ್ದ ಸ್ನೇಹಿತನ ಬೆಂಬಲದೊಂದಿಗೆ ಸ್ಮಾರಕವನ್ನು ನಿರ್ಮಿಸಲು ಪ್ರಾರಂಭಿಸಿದರು.

ರಾಜಸ್ಥಾನದಿಂದ ಅಮೃತಶಿಲೆಯನ್ನು ಖರೀದಿಸಿದರು. ಆಗ್ರಾದ ತಾಜ್ ಮಹಲ್‌ನಲ್ಲಿರುವಂತೆಯೇ ಸ್ಮಾರಕದ ಸುತ್ತಲೂ ಹಲವು ಮಾರ್ಗಗಳು ಮತ್ತು ಕಾಲುದಾರಿಗಳನ್ನು ಮಾಡಿದರು. ಜೂನ್ 2 ರಂದು ಸ್ಮಾರಕವನ್ನು ಉದ್ಘಾಟಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿದರು.

ಈ ಮಿನಿ ತಾಜ್​ಮಹಲ್​ನಲ್ಲಿ ಎಲ್ಲ ಧರ್ಮದ ಜನರು ಧ್ಯಾನ ಮಾಡಲು ಕೇಂದ್ರಗಳನ್ನು ಹೊಂದಿದೆ. ಇದು ಥೇಟ್​ ತಾಜ್​ಮಹಲ್​ನಂತೆಯೇ ನಿರ್ಮಿಸಲಾಗಿದೆ. ಪ್ರಸ್ತುತ 10 ವಿದ್ಯಾರ್ಥಿಗಳು ಉಳಿದುಕೊಳ್ಳಬಹುದಾದ ಮದರಸಾವು ಇಲ್ಲಿದೆ. ಉದ್ಯಮಿ ಅಮರುದ್ದೀನ್ ಅವರು ನಿರ್ಮಿಸಿದ ದಕ್ಷಿಣ ಭಾರತದ ಈ ತಾಜ್​ಮಹಲ್ ಬಗ್ಗೆ ಹೆಚ್ಚು ಪ್ರಚಾರ ಮಾಡಲಿಲ್ಲ. ಅದ್ಯಾವಾಗ ಜನರು ಕಣ್ಣಿಗೆ ಬಿತ್ತೋ ಅಂದಿನಿಂದ ಇದು ಪ್ರಚಲಿತಕ್ಕೆ ಬಂದಿದೆ.

ಇದನ್ನೂ ಓದಿ:Free Bus: ಮಹಿಳಾ ಪ್ರಯಾಣಿಕರಿಗೆ ಉಚಿತ ಸೇವೆ ಒದಗಿಸಲು ಸಿಂಗಾರಗೊಂಡ KSRTC ಬಸ್​ಗಳು- ಟಿಕೆಟ್​ ಯಂತ್ರ ಕೆಟ್ಟರೆ ಪಿಂಕ್ ಟಿಕೆಟ್ ವಿತರಣೆ

Last Updated : Jun 12, 2023, 4:51 PM IST

ABOUT THE AUTHOR

...view details