ಮೀರತ್(ಉತ್ತರಪ್ರದೇಶ):ಜನ್ಮದಿನಕ್ಕೆ ದೊಡ್ಡ ಕೇಕ್ ಕತ್ತರಿಸುವುದು ವಾಡಿಕೆ. ಆದರೆ, ಇಲ್ಲೊಬ್ಬರು 12 ಕೇಜಿ ಗಾತ್ರದ ಸಮೋಸಾವನ್ನು ತಯಾರಿಸಿದ್ದಾರೆ. ಅಲ್ಲದೇ, ಇದನ್ನು ಅರ್ಧಗಂಟೆ(30 ನಿಮಿಷ)ಯಲ್ಲಿ ತಿಂದು ಮುಗಿಸಿದರೆ, 71 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಇಲ್ಲಿನ ಕೌಶಲ್ ಸ್ವೀಟ್ಸ್‌ನ ಮಾಲೀಕ ಶುಭಂ ಕೌಶಲ್ ಎಂಬುವರು ಈ ಸಮೋಸಾವನ್ನು ತಯಾರಿಸಿದ್ದಾರೆ. ಜನರು ತಮ್ಮ ಜನ್ಮದಿನದ ಸಂಭ್ರಮಾಚರಣೆಯ ವೇಳೆ ಕೇಕ್ ಬದಲಾಗಿ ಈ ಸಮೋಸಾವನ್ನೇ ಕತ್ತರಿಸಿ ಸಂಭ್ರಮಿಸುವ ಸಲುವಾಗಿ ರೂಪಿಸಲಾಗಿದೆ. ಈ ವಿಭಿನ್ನ ಆಲೋಚನೆ ಯಶಸ್ವಿಯಾಗಿದ್ದು, ಹಲವು ಜನರು ಬೃಹತ್ ಸಮೋಸಾಕ್ಕೆ ಆರ್ಡರ್ ನೀಡುತ್ತಿದ್ದಾರಂತೆ.
ಶುಭಂ ಕೌಶಲ್ ಅವರು ಕೇಕ್ ಬದಲಿಗೆ ಬೇರೆ ಏನನ್ನಾದರೂ ರೂಪಿಸಬೇಕು ಎಂದು ಯೋಚನೆಯಲ್ಲಿದ್ದಾಗ, ಹೊಳೆದದ್ದೇ ಈ ದೊಡ್ಡ ಗಾತ್ರದ ಸಮೋಸಾ. ಮೊದಲು 4 ಕೆಜಿ, 8 ಕೆಜಿ ಸಮೋಸಾವನ್ನು ತಯಾರಿಸುತ್ತಿದ್ದರು. ಇದೀಗ 12 ಕೆಜಿ ಗಾತ್ರದ ಸಮೋಸಾವನ್ನು ರೂಪಿಸಿದ್ದಾರೆ. ಇದರ ಗಾತ್ರವನ್ನೇ ಕಂಡು ಬೆರಗಾಗಬೇಕು. ಅಷ್ಟು ದೊಡ್ಡದಿದೆ.
ಸಮೋಸಾದಲ್ಲಿ 7 ಕೆಜಿ ಖಾರ ಪದಾರ್ಥ:ಇದರಲ್ಲಿ ಆಲೂಗಡ್ಡೆ, ಬಟಾಣಿ, ಮಸಾಲೆ ಪದಾರ್ಥಗಳು, ಪನ್ನೀರ್ ಮತ್ತು ಡ್ರೈ ಫ್ರೂಟ್ಸ್ ತುಂಬಲಾಗಿದೆ. ಈ ಸಮೋಸಾವನ್ನು 30 ನಿಮಿಷಗಳಲ್ಲಿ ತಿಂದು ಮುಗಿಸಿದರೆ, 71,000 ರೂಪಾಯಿ ಗೆಲ್ಲುವ ಸವಾಲು ಕೂಡ ಇದೆ ಎಂದು ಶುಭಂ ಹೇಳುತ್ತಾರೆ.
ಈ ದೈತ್ಯ ಸಮೋಸವನ್ನು ತಯಾರಿಸಲು ಕೌಶಲ್ ಅವರ ಅಂಗಡಿಯಲ್ಲಿ ಬಾಣಸಿಗರಿಗೆ ಸುಮಾರು 6 ಗಂಟೆಗಳು ಹಿಡಿದಿವೆ. ಪ್ಯಾನ್‌ನಲ್ಲಿ ಸಮೋಸಾವನ್ನು ಬೇಯಿಸಲು 90 ನಿಮಿಷಗಳು ಮತ್ತು ಮೂವರು ಬಾಣಸಿಗರು ಇದನ್ನು ತಯಾರಿಸಿದ್ದಾರೆ. 12 ಕಿಲೋಗ್ರಾಂಗಳ ಸಮೋಸಾದಲ್ಲಿ ಸುಮಾರು ಏಳು ಕೆಜಿಯಷ್ಟು ಪದಾರ್ಥಗಳನ್ನು ಖಾರದ ಪದಾರ್ಥಗಳನ್ನು ತುಂಬಲಾಗಿದ ಎಂದು ಅಂಗಡಿ ಮಾಲೀಕರು ತಿಳಿಸಿದರು.
ಈ ಸಮೋಸಾ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ಅಂಗಡಿಗೆ ಆಗಾಗ್ಗೆ ಬರುವ ಆಹಾರ ಬ್ಲಾಗರ್‌ಗಳ ಗಮನವನ್ನು ಸೆಳೆದಿದೆ. ಸ್ಥಳೀಯರು ಮತ್ತು ಇತರ ಭಾಗಗಳಲ್ಲಿ ವಾಸಿಸುವ ಜನರಿಂದಲೂ ಇದಕ್ಕೆ ಬೇಡಿಕೆ ಇಟ್ಟಿದ್ದಾರೆ. ಮುಂಗಡ ಆರ್ಡರ್‌ಗಳನ್ನು ಕೂಡ ನೀಡಿದ್ದಾರೆ. ಮೊದಲು ಮಾಮೂಲಿ ಸಮೋಸಾಗಳ ಬದಲಾಗಿ ವಿಭಿನ್ನವಾಗಿ ಮಾಡುವ ಸಲುವಾಗಿ ಈ ಸಮೋಸ ಮಾಡಲು ನಿರ್ಧರಿಸಿದೆವು. ಮೊದಲು ನಾಲ್ಕು ಕೆ.ಜಿ, ನಂತರ 8 ಕೆ.ಜಿ ಸಮೋಸ ಮಾಡತೊಡಗಿದೆವು. ಇವೆರಡೂ ಜನಪ್ರಿಯವಾದವು. ಇದಾದ ನಂತರ ನಾವು 12 ಕೆಜಿ ಸಮೋಸಾವನ್ನು ಸಿದ್ಧಪಡಿಸಿದ್ದೇವೆ ಎಂದು ಕೌಶಲ್ ಹೇಳಿದರು.
12 ಕೆಜಿ ತೂಕದ ಸಮೋಸಾ 1,500 ರೂಪಾಯಿ ಆಗಿದೆ. ದೊಡ್ಡ ಸಮೋಸಾಗಳಿಗೆ ಇದುವರೆಗೆ ಸುಮಾರು 40-50 ಆರ್ಡರ್‌ಗಳು ಬಂದಿವೆ. ಇದು ದೇಶದಲ್ಲೇ ಅತಿ ದೊಡ್ಡದಾಗಿದೆ ಎಂದು ಅವರು ಹೇಳುತ್ತಾರೆ. ಈ ಸಮೋಸಾ ಅಲ್ಲದೇ, ಮೀರತ್ನಲ್ಲಿ 'ರೆವ್ರಿ' ಮತ್ತು 'ಗಜಕ್'ನಂತಹ ಸಿಹಿತಿಂಡಿಗಳು ಜನಪ್ರಿಯವಾಗಿದೆ.
ಇದನ್ನೂ ಓದಿ:World Father's Day: ಬೀದಿ ಬದಿ ಟೀ ಮಾರಿ ಮೂವರು ಹೆಣ್ಣುಮಕ್ಕಳಿಗೆ ಬದುಕಿನ 'ಕುಸ್ತಿ' ಹೇಳಿಕೊಟ್ಟ ಈ ಅಪ್ಪ!