ಮುಕ್ತಸರ್ ಸಾಹಿಬ್ (ಪಂಜಾಬ್):ಜಿಲ್ಲೆಯ ವಾರಿಂಗ್ ಗ್ರಾಮದ ಸಮೀಪ ಪ್ರಯಾಣಿಕರಿದ್ದ ಬಸ್ ಕಾಲುವೆಗೆ ಬಿದ್ದ ಘಟನೆ ಮಂಗಳವಾರ ನಡೆದಿದೆ. ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಬಸ್ ಮುಕ್ತಸರ್ ಸಾಹಿಬ್ ಎಂಬಲ್ಲಿಂದ ಮಧ್ಯಾಹ್ನ ಸುಮಾರು 1 ಗಂಟೆಗೆ ಕೊಟ್ಕಪುರಕ್ಕೆ ಹೊರಟಿತ್ತು. ಭಾರಿ ಮಳೆ ಮತ್ತು ಅತಿ ವೇಗ ಸಂಚಾರದಿಂದಾಗಿ ನಿಯಂತ್ರಣ ಕಳೆದುಕೊಂಡು ಘಟನೆ ಜರುಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ತಡೆಗೋಡೆಗೆ ಬಸ್ ಡಿಕ್ಕಿ: ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದೆ. ಕಬ್ಬಿಣದ ತಡೆಗೋಡೆ ಇದ್ದುದರಿಂದ ಬಸ್ನ ಅರ್ಧ ಭಾಗ ಕಾಲುವೆಗೆ ಉರುಳಿದೆ. ಉಳಿದರ್ಧ ಭಾಗ ಸೇತುವೆಯ ಮೇಲೆಯೇ ನೇತಾಡುತ್ತಿತ್ತು. ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಗಾಯಾಳು ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು.
ಮುಖ್ಯಮಂತ್ರಿ ಸಂತಾಪ: ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿ ಮೃತರಿಗೆ ಸಂತಾಪ ವ್ಯಕ್ತಪಡಿಸಿ, ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಿರುವುದಾಗಿ ತಿಳಿಸಿದ್ದಾರೆ. ಸಂಪುಟ ಸಚಿವ ಗುರ್ಮೀತ್ ಸಿಂಗ್ ಖುಡಿಯಾನ್ ಮತ್ತು ಶಾಸಕ ಕಾಕಾ ಬ್ರಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿಂದಿನ ಘಟನೆ: 1992ರಲ್ಲಿ ಪಂಜಾಬ್‌ನ ಸರ್ಕಾರಿ ಬಸ್ವೊಂದು ಕಾಲುವೆಗೆ ಬಿದ್ದಿತ್ತು. ಘಟನೆಯಲ್ಲಿ ಮಕ್ಕಳು ಸೇರಿದಂತೆ ಸುಮಾರು 80 ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ರಸ್ತೆಯಲ್ಲಿ ಇನ್ನೂ ಹೊಸ ಸೇತುವೆ ನಿರ್ಮಾಣವಾಗಿಲ್ಲ ಎಂಬ ಆರೋಪವಿದೆ.
ಇದನ್ನೂ ಓದಿ:ಮಂಗಳೂರು: ನಿಂತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಲ್ಲಿ ಬಂದು ಗುದ್ದಿದ ಬಸ್.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಹಿಂದಿನ ಅಪಘಾತ ಪ್ರಕರಣಗಳು: ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತ:ಇಲ್ಲಿನರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೆಪ್ಟೆಂಬರ್ 18ರ ಬೆಳಗ್ಗೆ ಸ್ವಿಫ್ಟ್ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಾಯಗೊಂಡಿದ್ದ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ ಗ್ರಾಮದ ಬಳಿ ಘಟನೆ ಅಪಘಾತ ಸಂಭವಿಸಿತ್ತು. ಸ್ವಿಫ್ಟ್ ಕಾರಿನಲ್ಲಿದ್ದ ಐವರ ಪೈಕಿ ಮೂವರು ದುರ್ಮರಣ ಹೊಂದಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಿಂತಿದ್ದ ಬೈಕ್ಗೆ ಗುದ್ದಿದ ಬಸ್: ಮಂಗಳೂರಿನಲ್ಲಿ ರಸ್ತೆ ದಾಟಲೆಂದು ನಿಂತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಖಾಸಗಿ ಬಸ್ ರಭಸವಾಗಿ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ನಡೆದಿತ್ತು. ಭಾನುವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ನ ಹೊಸಬೆಟ್ಟು ಸಮೀಪ ಘಟನೆ ನಡೆದಿದೆ. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೆಳಗ್ಗೆ 7:55ರ ವೇಳೆಗೆ ಖಾಸಗಿ ಎಕ್ಸ್‌ಪ್ರೆಸ್ ಬಸ್ ಶರವೇಗದಿಂದ ಬಂದು ಬೈಕ್ಗೆ ಗುದ್ದಿದೆ. ಬೈಕ್ ಸವಾರರಾದ ಪಕ್ಷಿಕೆರೆ ಹೊಸಕಾಡು ನಿವಾಸಿ ಅಬ್ದುಲ್ ಖಾದರ್ ಅರ್ಫಾನ್ ಮತ್ತು ಹಳೆಯಂಗಡಿ ಇಂದಿರಾ ನಗರದ ನಿವಾಸಿ ಅಮೀರ್ ಸಾಹಿಲ್ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ನಗರದ ಎ.ಜೆ.ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಚಾಲಕ ಡೆಲ್ಸನ್ ಕ್ಯಾಸ್ಟಲಿನೋ ಎಂಬಾತನ ವಿರುದ್ಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.