ನವದೆಹಲಿ: ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ್ದಲ್ಲದೇ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಕೈಗೆತ್ತಿಕೊಂಡಿದ್ದು, ಎಫ್‌ಐಆರ್ ದಾಖಲಿಸಿದೆ ಎಂದು ಸಿಬಿಐ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಘಟನೆ ನಡೆದಿದೆ ಎನ್ನಲಾದ ಮಣಿಪುರದ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿ ಭಾರೀ ದೇಶಾದ್ಯಂತ ಸದ್ದು ಮಾಡಿತ್ತು. ಆ ವಿಡಿಯೋದಲ್ಲಿ ಗುಂಪೊಂದು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿತ್ತು. ಈ ತಿಂಗಳ ಆರಂಭದಲ್ಲಿ ವಿಡಿಯೋ ವೈರಲ್ ಆಗಿತ್ತು. ಈ ವೈರಲ್ ವಿಡಿಯೋದಿಂದ ದೇಶಾದ್ಯಂತ ಭಾರಿ ಕೋಲಾಹಲ ಉಂಟಾಗಿತ್ತು.
ಕೇಂದ್ರ ಗೃಹ ಸಚಿವಾಲಯದ ಉಲ್ಲೇಖದ ಮೇರೆಗೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಮಣಿಪುರ ಪೊಲೀಸರು ದಾಖಲಿಸಿದ ಎಫ್‌ಐಆರ್ ಅನ್ನು ಸಿಬಿಐ ತನ್ನ ಕಾರ್ಯವಿಧಾನಕ್ಕೆ ಅನುಗುಣವಾಗಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ಮರುದಿನವೇ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಮಣಿಪುರದ ಪರಿಸ್ಥಿತಿಯ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಸಮರವನ್ನು ಉಂಟುಮಾಡಿತ್ತು.
ಮೂಲಗಳ ಪ್ರಕಾರ, ಪ್ರಕರಣದ ತನಿಖೆಗಾಗಿ ಉನ್ನತ ಮಟ್ಟದ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಈ ಹಿಂದೆ ಎಸ್‌ಐಟಿ ರಚಿಸಲಾಗಿತ್ತು. ಮತ್ತು ಪ್ರಸ್ತುತ ಮಣಿಪುರದಲ್ಲಿರುವ ಸಿಬಿಐ ಅಧಿಕಾರಿಗಳು ವೈರಲ್ ವಿಡಿಯೋಗೆ ಸಂಬಂಧಿಸಿದ ಪ್ರಕರಣ ಸೇರಿದಂತೆ ಇತರ ಪ್ರಕರಣಗಳ ತನಿಖೆ ನಡೆಸಲಿದ್ದಾರೆ. ಸಿಬಿಐ ತಂಡವು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಿದೆ. ಸಾಕ್ಷ್ಯಾಧಾರಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಯು ಈಗಾಗಲೇ ಸ್ಥಳೀಯ ಪೊಲೀಸರಿಂದ ನಡೆಯುತ್ತಿದೆ.
ಗುರುವಾರ ಗೃಹ ಸಚಿವಾಲಯವು (MHA) ಪ್ರಕರಣವನ್ನು ಸಿಬಿಐಗೆ ಉಲ್ಲೇಖಿಸಿದೆ. ಉಲ್ಲೇಖಿಸಿದ 48 ಗಂಟೆಗಳ ಒಳಗೆ ಸಂಸ್ಥೆಯು ಪ್ರಕರಣ ದಾಖಲಿಸಿಕೊಂಡಿದೆ. ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಮಣಿಪುರ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದರು. ಮೂಲಗಳ ಪ್ರಕಾರ, ವೈರಲ್ ವಿಡಿಯೋವನ್ನು ಚಿತ್ರೀಕರಿಸಿದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅದನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ.
ಮೇ 3 ರಂದು ಮಣಿಪುರದ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ (ATSUM) ರಾಜ್ಯ ಸರ್ಕಾರವು ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ (ಎಸ್‌ಟಿ) ಸೇರಿಸಲು ಪರಿಗಣಿಸುವಂತೆ ಒತ್ತಾಯಿಸಿ, ಹೈಕೋರ್ಟಿನ ಆದೇಶದ ವಿರುದ್ಧ ಪ್ರತಿಭಟಿಸಲು ನಡೆಸಿದ ರ‍್ಯಾಲಿಯ ನಂತರ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಇವುಗಳ ಮಧ್ಯೆ ವಿರೋಧ ಪಕ್ಷಗಳ 20 ಸದಸ್ಯರ ನಿಯೋಗ ಶನಿವಾರ ಮಣಿಪುರ ತಲುಪಿದೆ. ಸದಸ್ಯರು ತಮ್ಮ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿ ಹಿಂಸಾಚಾರದಿಂದ ಸಂತ್ರಸ್ತರಾದ ಜನರನ್ನು ಭೇಟಿ ಮಾಡಲಿದ್ದಾರೆ. ಮಣಿಪುರ ವಿಷಯದ ಬಗ್ಗೆ ಪ್ರತಿಪಕ್ಷಗಳು ದನಿಗೂಡಿಸುವುದರೊಂದಿಗೆ, ಉಭಯ ಸದನಗಳಲ್ಲಿ ಚರ್ಚೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಒತ್ತಾಯಿಸಿದ್ದವು. ಇದರಿಂದಾಗಿ ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನವು ಪದೇ ಪದೇ ವಿಳಂಬವಾಗುತ್ತಿತ್ತು.
ಇದನ್ನೂ ಓದಿ:ಮಣಿಪುರ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ: ಬಾಲಾಪರಾಧಿ ಸೇರಿ 6 ಮಂದಿ ಸೆರೆ, ವಲಸೆ ಹೋಗದಂತೆ ಸರ್ಕಾರದ ಮನವಿ