ಕರ್ನಾಟಕ

karnataka

ETV Bharat / bharat

ಮಣಿಪುರದಲ್ಲಿ ಭುಗಿಲೆದ್ದ 'ಮೀಸಲಾತಿ' ಹಿಂಸಾಚಾರ: 7,500 ಜನರ ಸ್ಥಳಾಂತರ.. ಸಿಎಂ​ ಜೊತೆ ಶಾ ಮಾತುಕತೆ

ನನ್ನ ರಾಜ್ಯ ಮಣಿಪುರ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ ಎಂದು ಖ್ಯಾತ ಬಾಕ್ಸರ್, ಮಾಜಿ ರಾಜ್ಯಸಭಾ ಸಂಸದೆ ಎಂ.ಸಿ. ಮೇರಿ ಕೋಮ್ ಟ್ವೀಟ್​ ಮಾಡಿದ್ದಾರೆ.

Etv Bharat
Etv Bharat

By

Published : May 4, 2023, 12:51 PM IST

ನವದೆಹಲಿ/ಇಂಫಾಲ್​: ಈಶಾನ್ಯ ಭಾಗದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬುಡಕಟ್ಟು ಜನಾಂಗದ ಆಂದೋಲನದ ಸಂದರ್ಭದಲ್ಲಿ ಈ ಹಿಂಸಾಚಾರ ಉಂಟಾಗಿದ್ದು, ಹಲವೆಡೆ ಬೆಂಕಿ ಹಚ್ಚಲಾಗಿದೆ. ಈಗಾಗಲೇ ಭದ್ರತೆ ಮತ್ತು ಪರಿಹಾರ ಕಾರ್ಯಕ್ಕಾಗಿ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ. ಜೊತೆಗೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ ಪರಿಸ್ಥಿತಿ ಅಲೋಕಿಸಿದ್ದಾರೆ.

ಇಂಫಾಲ್ ಕಣಿವೆಯಲ್ಲಿ ಪ್ರಾಬಲ್ಯ ಹೊಂದಿರುವ ಬುಡಕಟ್ಟು ಜನಾಂಗವಲ್ಲದ ಮೈಟೀಸ್‌ ಸಮುದಾಯದ ಪರಿಶಿಷ್ಟ ಪಂಗಡ (ಎಸ್​ಟಿ) ಸ್ಥಾನಮಾನಕ್ಕಾಗಿ ಬೇಡಿಕೆ ವಿವಾದಕ್ಕೆ ಕಾರಣವಾಗಿದೆ. ಈ ಬೇಡಿಕೆಯನ್ನು ವಿರೋಧಿಸಿ ಚುರಾಚಂದ್‌ಪುರ ಜಿಲ್ಲೆಯ ಟೊರ್ಬಂಗ್ ಪ್ರದೇಶದಲ್ಲಿ ಅಖಿಲ ಬುಡಕಟ್ಟು ವಿದ್ಯಾರ್ಥಿ ಸಂಘ (ಎಟಿಎಸ್​ಯುಎಂ)ವು ಬುಧವಾರ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎರಡು ಕಡೆಯ ಜನಾಂಗಗಳ ನಡುವೆ ಘರ್ಷಣೆಗಳು ಭುಗಿಲೆದ್ದಿವೆ. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಲವಾರು ಸುತ್ತಿನ ಅಶ್ರುವಾಯು ಪ್ರಯೋಗಿಸಿದ್ದಾರೆ.

ಆದರೆ, ಇದರ ನಂತರದಲ್ಲಿ ಹಿಂಸಾಚಾರವು ಮಣಿಪುರದ ಇತರ ಭಾಗಗಳಿಗೆ ಹರಡಿದ್ದು, ಕೆಲವು ಭಾಗಗಳು ಬೆಂಕಿಯಿಂದ ಇಡೀ ರಾತ್ರಿ ಹೊತ್ತಿ ಉರಿದಿವೆ. ಇದೇ ವೇಳೆ, ಹಿಂಸಾಚಾರ ಪೀಡಿತ ಸ್ಥಳಗಳಿಂದ ಎಲ್ಲ ಸಮುದಾಯಗಳ 7,500ಕ್ಕೂ ಹೆಚ್ಚು ಜನರನ್ನು ರಾತ್ರಿಯಿಡೀ ಸ್ಥಳಾಂತರ ಮಾಡಲಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಮಣಿಪುರ ಪೊಲೀಸ್​ ಪಡೆಗಳೊಂದಿಗೆ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ ಪಡೆಗಳು ಈಗಾಗಲೇ ಸ್ಥಳಕ್ಕೆ ದೌಡಾಯಿಸಿವೆ. ಸಿಆರ್‌ಪಿಎಫ್‌ನ ಸುಮಾರು 15 ತುಕಡಿಗಳು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಿಯೋಜನೆಗಾಗಿ ಕ್ಷಿಪ್ರ ಕಾರ್ಯಪಡೆ (ಆರ್​​ಎಎಫ್​)ಯ ಐದು ತುಕಡಿಗಳನ್ನು ಸಹ ಕಳುಹಿಸಲಾಗಿದೆ. ಇತರ 15 ಆರ್​​ಎಎಫ್ ತುಕಡಿಗಳಿಗೆ ಸನ್ನದ್ಧ ಸ್ಥಿತಿಯಲ್ಲಿರಲು ಸೂಚಿಸಲಾಗಿದೆ.

ಸಿಎಂ ಬಿರೇನ್​ ಜೊತೆ ಶಾ ಮಾತುಕತೆ: ರಾಜ್ಯದಲ್ಲಿನ ಪರಿಸ್ಥಿತಿ ಬಗ್ಗೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗೆ ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸದ್ಯದ ಪರಿಸ್ಥಿತಿ ಮತ್ತು ಶಾಂತಿ ಮರು ಸ್ಥಾಪಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅಮಿತ್​ ಶಾ ಅವರಿಗೆ ಸಿಎಂ ವಿವರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಜೆಪಿಯ ದ್ವೇಷ ರಾಜಕಾರಣ ಕಾರಣ - ಖರ್ಗೆ:ಈ ಹಿಂಸಾಚಾರದ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್​ ಮಾಡಿದ್ದು, ''ಮಣಿಪುರದಲ್ಲಿ ಎರಡು ಸಮುದಾಯಗಳ ನಡುವಿನ ಹಿಂಸಾತ್ಮಕ ಘರ್ಷಣೆಗೆ ಬಿಜೆಪಿಯ ದ್ವೇಷದ ರಾಜಕಾರಣ ಕಾರಣ. ಜನರು ಸಂಯಮದಿಂದ ವರ್ತಿಸಿ ರಾಜ್ಯದಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು'' ಎಂದು ಹೇಳಿದ್ದಾರೆ.

ಮಣಿಪುರ ಉರಿಯುತ್ತಿದೆ - ಮೇರಿ ಕೋಮ್ ಟ್ವೀಟ್​: ಮತ್ತೊಂದೆಡೆ, ತಮ್ಮ ತವರು ರಾಜ್ಯ ಮಣಿಪುರದ ಪರಿಸ್ಥಿತಿ ಬಗ್ಗೆ ಖ್ಯಾತ ಬಾಕ್ಸರ್, ಮಾಜಿ ರಾಜ್ಯಸಭಾ ಸಂಸದೆ ಎಂ.ಸಿ.ಮೇರಿ ಕೋಮ್ ಟ್ವೀಟ್​ ಮಾಡಿ, ''ನನ್ನ ರಾಜ್ಯ ಮಣಿಪುರ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ'' ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರಿಗೆ ಟ್ಯಾಗ್​ ಮಾಡಿ ಮನವಿ ಮಾಡಿದ್ದಾರೆ.

ಅಲ್ಲದೇ, ಈ ಬಗ್ಗೆ ಮಾತನಾಡಿರುವ ಅವರು, ''ಮಣಿಪುರದ ಪರಿಸ್ಥಿತಿ ಬಗ್ಗೆ ಬೇಸರ ಇದೆ. ನಿನ್ನೆ ರಾತ್ರಿಯಿಂದ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಮತ್ತು ಶಾಂತಿ ಹಾಗೂ ಭದ್ರತೆಯನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈ ಹಿಂಸಾಚಾರದಲ್ಲಿ ಕೆಲವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದು ದುರದೃಷ್ಟಕರ. ಈ ಪರಿಸ್ಥಿತಿಯು ಬೇಗನೆ ಸಹಜ ಸ್ಥಿತಿಗೆ ಬರಬೇಕು'' ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೊಲೆರೊ-ಟ್ರಕ್‌ ಭೀಕರ ರಸ್ತೆ ಅಪಘಾತ: ಮದುವೆಗೆ ತೆರಳುತ್ತಿದ್ದ ಒಂದೇ ಕುಟುಂಬದ 11 ಜನ ಸಾವು!

ABOUT THE AUTHOR

...view details