ಕರ್ನಾಟಕ

karnataka

ETV Bharat / bharat

ರಾಜ್ಯ ಗೆದ್ದ ಬಳಿಕ ಕೇಂದ್ರದತ್ತ ಗುರಿ ಇಟ್ಟ ಮಮತಾ: 'ಲೋಕ' ಸಮರಕ್ಕೆ ವಿಪಕ್ಷಗಳ ಒಗ್ಗೂಡಿಸುವ ಪ್ಲಾನ್‌

ಪೆಗಾಸಸ್ ಗೂಢಚಾರಿಕೆ​ ವಿಚಾರವನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳು ಟೀಕೆಗಳ ಸುರಿಮಳೆಯನ್ನೇ ಮಾಡುತ್ತಿವೆ. ಇದೀಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರದಿ. ಇಂದು ಮಾತನಾಡಿದ ಅವರು, ಇದು ವೈಯಕ್ತಿಕವಾಗಿ ನಡೆಸುತ್ತಿರುವ ದಾಳಿ ಅಲ್ಲವೇ? ಎಂದು ಮೋದಿ ವಿರುದ್ಧ ಕೆಂಡ ಕಾರಿದ್ದಾರೆ. ಇದೇ ವೇಳೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿ ಮಣಿಸುವ ಬಗೆಗೂ ಮಾತನಾಡಿದರು.

By

Published : Jul 21, 2021, 4:46 PM IST

Mamata
Mamata

ಕೋಲ್ಕತ್ತಾ(ಪಶ್ಚಿಮ ಬಂಗಾಳ)​​: ಕಳೆದ ಕೆಲವು ತಿಂಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ​(TMC) ಮೂರನೇ ಅವಧಿಗೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಇದೀಗ ಅವರ ಕಣ್ಣು 2024ರ ಲೋಕಸಭೆ ಚುನಾವಣೆ ಮೇಲೆ ಬಿದ್ದಿದೆ. ಅದಕ್ಕಾಗಿ ಈಗಿನಿಂದಲೇ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಬಿಜೆಪಿಗೆ ಸೋಲಿನ ರುಚಿ ತೋರಿಸುವ ಇರಾದೆಯಿಂದ ದೇಶದ ಎಲ್ಲ ಪ್ರಮುಖ ವಿಪಕ್ಷಗಳಿಗೆ ಆಹ್ವಾನ ನೀಡಿರುವ ಮಮತಾ, ಬಿಜೆಪಿಗೆ ಪಾಠ ಕಲಿಸುವ ಅವಶ್ಯಕತೆ ಇದೆ ಎಂದಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್​, ಎಎಪಿ, ಡಿಎಂಕೆ, ಅಕಾಲಿ ದಳ, ಎನ್​ಸಿಪಿ, ಟಿಆರ್​ಎಸ್​ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರು ಒಗ್ಗೂಡುವಂತೆಯೂ ಅವರು ಮನವಿ ಮಾಡಿದ್ದಾರೆ.

ಇದೀಗ ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದೆ. ಇದರ ಬೆನ್ನಲ್ಲೇ ಮಮತಾ ಜುಲೈ 27, 28 ಹಾಗೂ 29ರಂದು ದೆಹಲಿಯಲ್ಲಿ ಉಳಿದುಕೊಂಡು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಸೇರಿದಂತೆ ವಿವಿಧ ಪಕ್ಷಗಳ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.

ಬಿಜೆಪಿಯಿಂದ ದೇಶವನ್ನು ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ. ಈ ಸರ್ಕಾರದ ಅವಧಿಯಲ್ಲಿ ಯಾರೂ ಕೂಡ ಸುರಕ್ಷಿತವಾಗಿಲ್ಲ. 2024ರ ಲೋಕಸಭೆ ಚುನಾವಣೆಗೋಸ್ಕರ ನಾವು ಈಗಿನಿಂದಲೇ ಹೋರಾಟ ಶುರು ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ ಹುತಾತ್ಮ ದಿನದ ಅಂಗವಾಗಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸಿದೆ. ಈ ಮೂಲಕ ಭಾರತೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಾವು 'ಕೇಲ್​ ಹೊಬೆ'(ಬೆಂಗಾಲಿ ಭಾಷೆಯಲ್ಲಿ ಆಟ ಶುರು ಎಂದರ್ಥ) ಸ್ಲೋಗನ್​ ಬಳಕೆ ಮಾಡಿದ್ದೆವು. ಇದೀಗ ದೇಶಾದ್ಯಂತ ಅದು ಮುಂದುವರೆಯಬೇಕಿದೆ. ಈ ಮೂಲಕ ಬಿಜೆಪಿಯನ್ನು ಸಂಪೂರ್ಣವಾಗಿ ಕಿತ್ತುಹಾಕಬೇಕಾಗಿದೆ ಎಂದರು.

ನಾನು ಬಳಕೆ ಮಾಡುವ ಫೋನ್​ಗೆ ಪ್ಲಾಸ್ಟಿಕ್​ ಕವರ್​ ಹಾಕಿದ್ದೇನೆ. ಇದೇ ರೀತಿ ಕೇಂದ್ರ ಸರ್ಕಾರಕ್ಕೂ ಪ್ಲಾಸ್ಟಿಕ್​ ಹಾಕಬೇಕಾಗಿದೆ ಎಂದಿರುವ ಮಮತಾ, ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿದಾಗ ಮಾತ್ರ ಸಾಧ್ಯವಿದೆ ಎಂದ ಹೇಳಿದರು.

ABOUT THE AUTHOR

...view details