ಅಲಪ್ಪುಳ (ಕೇರಳ): ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ಮಾಡಿದ ಆರೋಪದಲ್ಲಿ ಮಲಯಾಳಂ ಸಿನಿಮಾ ನಿರ್ದೇಶಕ ಶ್ರೀಕುಮಾರ್ ಮೆನನ್ ಅವರನ್ನು ಬಂಧಿಸಲಾಗಿದೆ.
ಶ್ರೀವತ್ಸಂ ಗ್ರೂಪ್ ನೀಡಿದ ದೂರಿನ ಮೇರೆಗೆ ಅಲಪ್ಪುಳ ದಕ್ಷಿಣ ಪೊಲೀಸರು ಶ್ರೀಕುಮಾರ್ನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಶ್ರೀಕುಮಾರ್ ಮೆನನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ಸಹ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಾಹಿತಿ ಹೊರಬರಬೇಕಿದೆ.
ಸಿನಿಮಾ ನಿರ್ಮಿಸಲು ಶ್ರೀವತ್ಸಂ ಗ್ರೂಪ್ನಿಂದ ಹಣ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಆದರೆ ಈ ಬಳಿಕ ಗ್ರೂಪ್ನಿಂದ ಹಲವಾರು ಬಾರಿ ಸಂಪರ್ಕಿಸಿದರೂ, ಚಿತ್ರದ ನಿರ್ಮಾಣದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರೂಪ್ನವರು ಶ್ರೀಕುಮಾರ್ ಮೆನನ್ ವಿರುದ್ಧ ಕೇಸು ದಾಖಲಿಸಿದ್ದಾರೆ.
ಶ್ರೀಕುಮಾರ್ ಮೆನನ್ ಕೇರಳದ ಜನಪ್ರಿಯ ಜಾಹೀರಾತು-ಚಲನಚಿತ್ರ ತಯಾರಕ. ಈ ಹಿಂದೆ ಅನೇಕ ಪ್ರಮುಖ ಕಂಪನಿಗಳಿಗೆ ಜಾಹೀರಾತುಗಳನ್ನು ರಚಿಸಿದ್ದಾರೆ. ಇದಲ್ಲದೆ ಮೋಹನ್ ಲಾಲ್ ಮತ್ತು ಮಂಜು ವಾರಿಯರ್ ನಟಿಸಿರುವ 'ಒಡಿಯನ್' ಚಿತ್ರವನ್ನೂ ನಿರ್ದೇಶಿಸಿದ್ದಾರೆ.
ಈ ಹಿಂದೆ ನಟಿ ಮಂಜು ವಾರಿಯರ್ ಅವರನ್ನು ಸೋಷಿಯಲ್ ಮೀಡಿಯಾದ ಮೂಲಕ ನಿಂದಿಸಿದ್ದಾರೆ ಎಂದು ಆರೋಪಿಸಿ 2019ರಲ್ಲಿ ಶ್ರೀಕುಮಾರ್ ಅವರನ್ನು ಬಂಧಿಸಲಾಗಿತ್ತು.