ಮುಂಬೈ (ಮಹಾರಾಷ್ಟ್ರ) : ರಸ್ತೆ ಕಾಮಗಾರಿ ಯೋಜನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಹುಕೋಟಿ ಬಡ್ಡಿ ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ವಾರ್ಧಾ ಜಿಲ್ಲೆಯ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಸರ್ಕಾರವು 5. 71 ಕೋಟಿ ರೂ.ಗಳನ್ನು ಪಾವತಿ ಮಾಡಬೇಕಿರುವ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಕಾನೂನು ಹೋರಾಟದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, 5 ಕೋಟಿ ರೂಪಾಯಿ ಅಸಲು ಮೊತ್ತಕ್ಕೆ ಸುಮಾರು 300 ಕೋಟಿ ರೂಪಾಯಿ ಬಡ್ಡಿಯನ್ನು ಪಾವತಿಸಬೇಕಾಗಿ ಬಂದಿದೆ.
ಪ್ರಕರಣದ ಹಿನ್ನೆಲೆ : ಖರೆ ಮತ್ತು ತಾರ್ಕುಂಡೆ ಇನ್ಫ್ರಾಸ್ಟ್ರಕ್ಚರ್ ಕಂಪನಿಯು 1997 ರ ಅಕ್ಟೋಬರ್ನಲ್ಲಿ ವರ್ಧಾ ಜಿಲ್ಲೆಯ ಜಾಮ್‌ನಿಂದ ಚಂದ್ರಾಪುರ ಜಿಲ್ಲೆಯ ವರೋರಾಗೆ ಸರಣಿ ರಸ್ತೆ, ಸೇತುವೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರರು ಈ ಕಾಮಗಾರಿಯನ್ನು 226 ಕೋಟಿ ರೂಪಾಯಿ ವೆಚ್ಚದಲ್ಲಿ 1998 ಅಕ್ಟೋಬರ್ ರಲ್ಲಿ ಪೂರ್ಣಗೊಳಿಸಿದ್ದರು. ಈ ಕಾಮಗಾರಿ ಮುಗಿದ ಬಳಿಕ ಟೋಲ್ ವಸೂಲಿ ನಿಲ್ಲಿಸಿ ರಸ್ತೆ, ಸೇತುವೆಯನ್ನು ಸಾರ್ವಜನಿಕ ಇಲಾಖೆಗೆ ವರ್ಗಾಯಿಸಲಾಗಿತ್ತು.
ಗುತ್ತಿದಾರನಿಗೆ 5 ಕೋಟಿ ಪಾವತಿಸುವಂತೆ ಆದೇಶ :ಈ ಕಾಮಗಾರಿಯ ಬಿಲ್ ಪಾವತಿಸದ ಕಾರಣ ಗುತ್ತಿಗೆದಾರರು ಮಧ್ಯಸ್ಥಿಕೆಗೆ ಒತ್ತಾಯಿಸಿದರು. ಅದರಂತೆ ನಿವೃತ್ತ ಮುಖ್ಯ ಎಂಜಿನಿಯರ್ ಆರ್.ಎಚ್. ತದ್ವಿ ಅವರನ್ನು ಮಧ್ಯಸ್ಥರದಾರನ್ನಾಗಿ ನೇಮಿಸಲಾಯಿತು. ಈ ಪ್ರಕರಣದಲ್ಲಿ 2004ರ ಮಾರ್ಚ್ 4ರಂದು ಮಧ್ಯಸ್ಥಿಕೆದಾರರು ಗುತ್ತಿಗೆದಾರರಿಗೆ ತಿಂಗಳಿಗೆ ಶೇ.25ರ ಬಡ್ಡಿ ಸಮೇತ ರೂ.5 ಕೋಟಿ 71 ಲಕ್ಷ ಪಾವತಿಸುವಂತೆ ಆದೇಶಿಸಿದ್ದರು.
ಈ ಆದೇಶದ ವಿರುದ್ಧ ಸರ್ಕಾರವು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2006 ರ ಡಿಸೆಂಬರ್ 15ರಂದು ಮಧ್ಯಸ್ಥರ ಆದೇಶವನ್ನು ಎತ್ತಿಹಿಡಿಯಿತು. ಜೊತೆಗೆ ಅಸಲು ಮೊತ್ತದ ಬಡ್ಡಿಯನ್ನು ಶೇ. 25 ರಿಂದ 18 ಕ್ಕೆ ಇಳಿಸಲು ಆದೇಶಿಸಿತು.