ಕೊಚ್ಚಿ (ಕೇರಳ):ಲೈಫ್ ಮಿಷನ್ ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿ.ಎಂ.ರವೀಂದ್ರನ್ ಅವರು ಮಂಗಳವಾರ ಬೆಳಗ್ಗೆ ಕೊಚ್ಚಿಯಲ್ಲಿರುವ ಇಡಿ (ಜಾರಿ ನಿರ್ದೇಶನಾಲಯ) ಕಚೇರಿಗೆ ಹಾಜರಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಚೇರಿಗೆ ಹಾಜರಾಗುವಂತೆ ಇಡಿ ಸಮನ್ಸ್ ಕಳುಹಿಸಿತ್ತು.
ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರೂ ಸಿ.ಎಂ.ರವೀಂದ್ರ ಅವರು ಹಾಜರಾಗಿರಲಿಲ್ಲ. ವಿಧಾನಸಭೆ ಕಲಾಪ ನಡೆಯುತ್ತಿರುವುದರಿಂದ ವಿಚಾರಣೆಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿ.ಎಂ ರವೀಂದ್ರ ಅವರು ಇಡಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ಸ್ವಪ್ನಾ ಸುರೇಶ್ ಮತ್ತು ಸರಿತ್ ನೀಡಿದ ಹೇಳಿಕೆ ಮತ್ತು ಸಾಕ್ಷ್ಯ ಚಿತ್ರದ ಆದಾರದ ಮೇಲೆ ಸಿ.ಎಂ ರವೀಂದ್ರ ಅವರನ್ನು ವಿಚಾರಣೆ ನಡೆಸಲು ಇಡಿ ಸಮನ್ಸ್ ಕಳುಹಿಸಿತ್ತು. ರವೀಂದ್ರನ್ ಮತ್ತು ಆರೋಪಿ ಸ್ವಪ್ನಾ ಸುರೇಶ್ ನಡುವಿನ ಚಾಟ್ ವಿವರಗಳನ್ನೂ ಜಾರಿ ನಿರ್ದೇಶನಾಲಯ ಪರಿಶೀಲನೆ ನಡೆಸಿದೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ದಿನಗಳ ಕಾಲ ವಿಚಾರಣೆ ನಂತರ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಫೆಬ್ರವರಿ 14 ರಂದು ಬಂಧಿಸಲಾಯಿತು.
ಆದರೆ, ಶಿವಶಂಕರ್ ಅವರು ತಮ್ಮ ವಿರುದ್ಧ ಲೈಫ್ ಮಿಷನ್ ಲಂಚ ಪ್ರಕರಣ ಪೂರ್ವನಿಯೋಜಿತ ಎಂದು ಆರೋಪಿಸಿದ್ದರು. ಆದರೆ, ಜಾರಿ ನಿರ್ದೇಶನಾಲಯದ ಪ್ರಕಾರ, ಶಿವಶಂಕರ್ ಅವರು ಲೈಪ್ ಮಿಷನ್ ‘‘ಹಗರಣ’’ದಲ್ಲಿ ಕಮಿಷನ್ ಅನ್ನು ಸೃಷ್ಟಿಸಲು ‘‘ಸಕ್ರಿಯ ಬೆಂಬಲ’’ ನೀಡಿದ್ದಾರೆ ಎಂದು ಹೇಳಿದೆ.