ಉತ್ತರ ಪ್ರದೇಶ(ಲಖೀಂಪುರ ಖೇರಿ):ಜಿಲ್ಲೆಯಲ್ಲಿ ಹುಲಿ, ಚಿರತೆಗಳ ದಾಳಿಗೆ ಕಡಿವಾಣ ಬೀಳುತ್ತಿಲ್ಲ. ಭೀರಾ ಕೊತ್ವಾಲಿ ಪ್ರದೇಶದ ರಾಮನಗರ ಕಲನ್ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಹೋಗಿದ್ದ 13 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಈ ಮೂಲಕ ಎಂಟು ದಿನಗಳಲ್ಲಿ ಹುಲಿ ಮತ್ತು ಚಿರತೆ ದಾಳಿಗೆ ಬಲಿಯಾದವರ ಸಂಖ್ಯೆ ಜಿಲ್ಲೆಯಲ್ಲಿ ಐದಕ್ಕೆ ಏರಿಕೆಯಾಗಿದೆ.
ಭೀರಾ ಕೊತ್ವಾಲಿ ಪ್ರದೇಶದ ಬಿಜುವಾ ಚೌಕಿ ಪ್ರದೇಶದ ಶಾರದಾ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ರಾಮನಗರ ಕಲನ್ ಗ್ರಾಮದ ನಿವಾಸಿ ಮಥುರಾ ಅವರ 13 ವರ್ಷದ ಮಗಳು ಚೋಟಿ ತನ್ನ ತಂದೆ ಮತ್ತು ಸಹೋದರನೊಂದಿಗೆ ಮೇವು ತೆಗೆದುಕೊಂಡುಕೊಂಡು ಬರಲು ಕಬ್ಬಿನ ಗದ್ದೆಗೆ ಹೋಗಿದ್ದಳು. ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿ ಪ್ರವಾಹ ಉಂಟಾದ ಹಿನ್ನೆಲೆ ಮೇವಿನ ಕೊರತೆ ಎದುರಾಗಿದೆ. ಜನರು ಕಬ್ಬಿನ ಗದ್ದೆಯಲ್ಲಿರುವ ಪೊದೆಯನ್ನೇ ಕಿತ್ತು ಪ್ರಾಣಿಗಳಿಗೆ ನೀಡುತ್ತಿದ್ದಾರೆ.