ಶ್ರೀನಗರ :ಬನಿಹಾಲ್ ಬಳಿ ಭಾರೀ ಭೂಕುಸಿತ ಸಂಭವಿಸಿದೆ. ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ಸಾವಿರಾರು ವಾಹನಗಳು ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. ದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ಭೂಕುಸಿತದಿಂದ ಸುಮಾರು 270 ಕಿ.ಮೀ ಉದ್ದದ ಹೆದ್ದಾರಿಯ ಸಂಚಾರ ಸ್ಥಗಿತಗೊಂಡಿದೆ.
ಬೆಳಗ್ಗೆ 11ರ ಸುಮಾರು ಚತುಷ್ಪಥ ಯೋಜನೆಯ ಕಾಮಗಾರಿ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಭೂಕುಸಿತವಾಗಿದೆ. ರಸ್ತೆಯ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ರಸ್ತೆಯ ಮೇಲೆ ದೊಡ್ಡ ಬಂಡೆಗಳು ಉರುಳಿ ಬಿದ್ದಿರುವ ಕಾರಣ, ಸಂಚಾರ ಸರಿಪಡಿಸಲು ಕನಿಷ್ಠ 4 ಗಂಟೆಗಳ ಸಮಯ ಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅಸ್ಗರ್ ಮಲಿಕ್ ತಿಳಿಸಿದ್ದಾರೆ.