ತಿರುವನಂತಪುರಂ:ನಿಫಾ ಮತ್ತು ಕೋವಿಡ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದ ಕೇರಳ ಆರೋಗ್ಯ ಇಲಾಖೆ ಮಾಜಿ ಸಚಿವೆ ಕೆ.ಕೆ. ಶೈಲಜಾ ಅವರಿಗೆ ಘೋಷಿಸಲಾಗಿದ್ದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದಾರೆ. ಸಿಪಿಎಂ ಕೇಂದ್ರ ನಾಯಕತ್ವವು ಪ್ರಶಸ್ತಿಯನ್ನು ಸ್ವೀಕರಿಸದಿರಲು ಸೂಚಿಸಿದ ಕಾರಣ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಕೇರಳದಲ್ಲಿ ಮಾರಕವಾಗಿ ಕಾಡಿದ್ದ ನಿಫಾ ಮತ್ತು ಕೋವಿಡ್ ವಿರುದ್ಧ ಕೆಕೆ ಶೈಲಜಾ ಅವರು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಸಲ್ಲಿಸಿದ ಸೇವೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕಾಪಾಡುವ ಬದ್ಧತೆ ಮತ್ತು ಸೇವೆಯನ್ನು ಗುರುತಿಸಿದ ಪ್ರತಿಷ್ಠಾನವು 64ನೇ ಮ್ಯಾಗ್ಸೆಸೆ ಪ್ರಶಸ್ತಿ ನೀಡಲು ಮುಂದಾಗಿತ್ತು.
ಪ್ರಶಸ್ತಿ ಸ್ವೀಕರಿಸಲು ಶೈಲಜಾ ಅವರಲ್ಲಿ ಪ್ರತಿಷ್ಠಾನವು ಒಪ್ಪಿಗೆ ಕೇಳಿತ್ತು. ಬಳಿಕ ಶೈಲಜಾ ಅವರು ಪಕ್ಷದ ಕೇಂದ್ರ ನಾಯಕರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸಮಾಲೋಚನೆ ನಡೆದಿದ್ದು, ಅಂತಿಮವಾಗಿ ಪ್ರಶಸ್ತಿ ಪಡೆಯದಿರಲು ಹೈಕಮಾಂಡ್ ಸೂಚಿಸಿದೆ. ಇದರ ಬೆನ್ನಲ್ಲೇ ಶೈಲಜಾ ಅವರು ಪ್ರಶಸ್ತಿ ಸ್ವೀಕರಿಸದಿರುವ ಬಗ್ಗೆ ಪ್ರತಿಷ್ಠಾನಕ್ಕೆ ಪತ್ರ ಬರೆದಿದ್ದಾರೆ.
ಸಮಾಜ ಸೇವೆಗೆ ನೀಡುವ ಪ್ರಶಸ್ತಿ:ರಾಮನ್ ಮ್ಯಾಗ್ಸೆಸೆ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ. ಶೈಲಜಾ ಅವರು ಪ್ರಶಸ್ತಿ ಸ್ವೀಕರಿಸಿದ್ದರೆ ಕೇರಳದ ಮೊದಲ ಮಹಿಳೆ ಮತ್ತು ಐದನೇ ಮಲಯಾಳಿ ಎಂಬ ಕೀರ್ತಿಗೆ ಪಾತ್ರರಾಗುತ್ತಿದ್ದರು. ಈ ಹಿಂದೆ ವರ್ಗೀಸ್ ಕುರಿಯನ್, ಎಂಎಸ್ ಸ್ವಾಮಿನಾಥನ್, ಬಿಜಿ ವರ್ಗೀಸ್ ಮತ್ತು ಟಿಎನ್ ಶೇಷನ್ ಅವರು ಪ್ರಶಸ್ತಿಯನ್ನು ಪಡೆದಿದ್ದಾರೆ.