ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ನಲ್ಲಿ ಖರ್ಗೆ ಯುಗಾರಂಭ: ಪಕ್ಷದ​ ಪುನಶ್ಚೇತನವೇ ಸವಾಲು - aicc president mallikarjun kharge speech

24 ವರ್ಷಗಳ ನಂತರ ನೆಹರೂ - ಗಾಂಧಿ ಕುಟುಂಬ ಹೊರತುಪಡಿಸಿ ಮೊದಲ ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆಯಾದ ಖರ್ಗೆ, ಪಕ್ಷ ಎದುರಿಸುತ್ತಿರುವ ಹಲವಾರು ಚುನಾವಣಾ ಮತ್ತು ಸಾಂಸ್ಥಿಕ ಸವಾಲು ನಿಭಾಯಿಸಬೇಕಿದೆ. ಅಪಾರ ಸಂಘಟನಾತ್ಮಕ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಖರ್ಗೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಪಕ್ಷದ ಉನ್ನತ ಹುದ್ದೆಯ ಚುನಾವಣಾ ಕಣಕ್ಕೆ ಪ್ರವೇಶಿಸಿದರು.

ಇಂದಿನಿಂದ ಎಐಸಿಸಿ ಅಧ್ಯಕ್ಷರಾಗಿ ಖರ್ಗೆ: ಕಾಂಗ್ರೆಸ್​ ಪುನಶ್ಚೇತನವೇ ಸವಾಲು!
Mallikarjun Kharge officially takes charge as Congress president

By

Published : Oct 26, 2022, 12:39 PM IST

Updated : Oct 26, 2022, 12:47 PM IST

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಉನ್ನತ ಹುದ್ದೆಯ ಚುನಾವಣಾ ಪ್ರಮಾಣಪತ್ರ ಹಸ್ತಾಂತರಿಸಿದರು.

ಇತರ ಪಕ್ಷಗಳು ಕಾಂಗ್ರೆಸ್‌ನಿಂದ ಪಾಠ ಕಲಿಯಲಿವೆ ಮತ್ತು ಅವು ಕೂಡ ರಹಸ್ಯ ಮತದಾನದ ಮೂಲಕ ತಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡಲಿವೆ ಎಂದು ನಾನು ಭಾವಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಮಿಸ್ತ್ರಿ ಹೇಳಿದರು.

ಇದಕ್ಕೂ ಮುನ್ನ ಖರ್ಗೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವರ ಮನೆಯಲ್ಲಿ ನಿನ್ನೆ ಭೇಟಿಯಾಗಿದ್ದರು. ನಂತರ ಇಂದು ಬೆಳಗ್ಗೆ ಮಹಾತ್ಮ ಗಾಂಧಿ ಅವರ ಸ್ಮಾರಕ ರಾಜ್‌ಘಾಟ್‌ನಲ್ಲಿ ನಮನ ಸಲ್ಲಿಸಿದರು. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ, ಮಾಜಿ ಉಪ ಪ್ರಧಾನಿ ಜಗಜೀವನ್ ರಾಮ್ ಸ್ಮಾರಕಗಳಿಗೆ ಕೂಡ ಖರ್ಗೆ ಭೇಟಿ ನೀಡಿದರು.

24 ವರ್ಷಗಳ ಬಳಿಕ ಗಾಂಧಿಯೇತರ ಕುಟುಂಬದ ಮೊದಲ ಅಧ್ಯಕ್ಷ:24 ವರ್ಷಗಳ ನಂತರ ನೆಹರೂ - ಗಾಂಧಿ ಕುಟುಂಬ ಹೊರತುಪಡಿಸಿ ಮೊದಲ ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆಯಾದ ಖರ್ಗೆ, ಪಕ್ಷ ಎದುರಿಸುತ್ತಿರುವ ಹಲವಾರು ಚುನಾವಣಾ ಮತ್ತು ಸಾಂಸ್ಥಿಕ ಸವಾಲು ನಿಭಾಯಿಸಬೇಕಿದೆ. ಅಪಾರ ಸಂಘಟನಾತ್ಮಕ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಖರ್ಗೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಪಕ್ಷದ ಉನ್ನತ ಹುದ್ದೆಯ ಚುನಾವಣಾ ಕಣಕ್ಕೆ ಪ್ರವೇಶಿಸಿದರು.

ನಿಜಲಿಂಗಪ್ಪ ಬಳಿಕ ಕರ್ನಾಟಕದಿಂದ ಎರಡನೇ ಅಧ್ಯಕ್ಷ:80 ವರ್ಷದ ಖರ್ಗೆ ಅವರು ಶಶಿ ತರೂರ್ ವಿರುದ್ಧ ಅಧಿಕಾರಸ್ಥರ ಅಭ್ಯರ್ಥಿ ಎಂದು ಹೇಳಲಾಗಿದ್ದು, ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಪಡೆದ 1072 ಮತಗಳ ವಿರುದ್ಧ 7,897 ಮತಗಳನ್ನು ಪಡೆದರು. ತಳಮಟ್ಟದಿಂದ ಬೆಳೆದ ನಾಯಕರಾಗಿರುವ ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್​​ನ ಉನ್ನತ ಹುದ್ದೆಗೇರಿದ ಕರ್ನಾಟಕದ ಎರಡನೇ ವ್ಯಕ್ತಿಯಾಗಿದ್ದಾರೆ. 1968 ರಲ್ಲಿ ಎಸ್ ನಿಜಲಿಂಗಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

ಅಪಾರ ರಾಜಕೀಯ ಅನುಭವ:ಸಕ್ರಿಯ ರಾಜಕೀಯದಲ್ಲಿ ಐದು ದಶಕಗಳ ಅನುಭವ ಹೊಂದಿರುವ ಖರ್ಗೆ ಕೇಂದ್ರ ಸಚಿವರಾಗಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದಾರೆ. ಕರ್ನಾಟಕದಲ್ಲಿ ಹಲವಾರು ಖಾತೆಗಳನ್ನು ನಿಭಾಯಿಸಿದ್ದಾರೆ. ಇವರು ಒಂಬತ್ತು ಬಾರಿ ಶಾಸಕರಾಗಿದ್ದರು. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳನ್ನು ಬಲ್ಲ ಖರ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತೀವ್ರ ಟೀಕಾಕಾರರಾಗಿದ್ದಾರೆ.

ಹಿಂದಿ ಭಾಷಿಕರ ಮುಖ್ಯ ಪ್ರದೇಶಗಳಾದ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಮತ್ತು ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಕಾಂಗ್ರೆಸ್ ಪುನರುಜ್ಜೀವನಗೊಳಿಸುವ ವಿಷಯದಲ್ಲಿ ಕಾರ್ಯತಂತ್ರ ರೂಪಿಸುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ. ಈಶಾನ್ಯ ಸೇರಿದಂತೆ ಇತರ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿದೆ. ಈ ಮಧ್ಯೆ ಎಎಪಿ ಕೆಲ ರಾಜ್ಯಗಳಲ್ಲಿ ಪ್ರಬಲವಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿದೆ. ಇವನ್ನೆಲ್ಲ ಮೀರಿ ಪಕ್ಷ ಸಂಘಟಿಸುವ ಜವಾಬ್ದಾರಿ ಖರ್ಗೆ ಮೇಲಿದೆ.

ಮುಂಬರುವ ದಿನಗಳಲ್ಲಿ ಎದುರಾಗಲಿವೆ ಹಲವು ಸವಾಲುಗಳು:ಈ ವರ್ಷಾಂತ್ಯದಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನ ವಿಧಾನಸಭಾ ಚುನಾವಣೆಗಳು ಖರ್ಗೆ ಮುಂದಿರುವ ತಕ್ಷಣದ ಸವಾಲುಗಳಾಗಿವೆ. ಇನ್ನು ಅವರ ತವರು ರಾಜ್ಯ ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳು ಮುಂದಿನ ವರ್ಷ 2024 ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಚುನಾವಣೆ ಎದುರಿಸಲಿವೆ.

ಪಕ್ಷದ ಹಲವಾರು ಹಿರಿಯ ನಾಯಕರು ಇತ್ತೀಚಿನ ತಿಂಗಳು ಮತ್ತು ವರ್ಷಗಳಲ್ಲಿ ಕಾಂಗ್ರೆಸ್ ತೊರೆದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಪಂಜಾಬ್ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಈ ರಾಜ್ಯಗಳಲ್ಲಿನ ಪಕ್ಷದ ನಾಯಕತ್ವದ ಆಯ್ಕೆಗಳೇ ಕಾರಣ ಎನ್ನಲಾಗಿದೆ.

ಪಕ್ಷದಲ್ಲಿ ತಮ್ಮ ಮುಂದಿನ ಪಾತ್ರ ಏನಿರಬೇಕು ಎಂಬುದನ್ನು ಖರ್ಗೆ ಅವರೇ ನಿರ್ಧರಿಸಲಿದ್ದಾರೆ ಎಂದು ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ಕೆಳಗಿಳಿದ ನಂತರ ಹಂಗಾಮಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಸೋನಿಯಾ ಗಾಂಧಿಯವರಿಂದ ಖರ್ಗೆ ಅವರು ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸೋನಿಯಾ ಗಾಂಧಿ ಅವರು ಈ ಹಿಂದೆ 19 ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದರು ಮತ್ತು ಎರಡು ಯುಪಿಎ ಸರ್ಕಾರಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಒಬ್ಬ ವ್ಯಕ್ತಿ.. ಒಂದು ಹುದ್ದೆ ನಿಯಮಕ್ಕೆ ಖರ್ಗೆ ಬದ್ಧ:ಮಾಜಿ ಕೇಂದ್ರದ ಕಾರ್ಮಿಕ ಮತ್ತು ರೈಲ್ವೇ ಸಚಿವರಾಗಿದ್ದ ಖರ್ಗೆ ಒಬ್ಬ ವ್ಯಕ್ತಿ, ಒಂದು ಹುದ್ದೆಯ ನಿಯಮಕ್ಕೆ ಅನುಗುಣವಾಗಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಖರ್ಗೆ ಸಾಗಿ ಬಂದ ಹಾದಿ:ಜುಲೈ 21, 1942 ರಂದು ಜನಿಸಿದ ಖರ್ಗೆ ತಮ್ಮ ಯೌವನದಲ್ಲಿ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1964-65ರಲ್ಲಿ ಗುಲ್ಬರ್ಗದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

1972 ಮತ್ತು 2009 ರ ನಡುವೆ ಕರ್ನಾಟಕದಲ್ಲಿ ಒಂಬತ್ತು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ಖರ್ಗೆ ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರಿಗೆ ಮತ್ತು ಜಲಸಂಪನ್ಮೂಲ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. 2005 ರಿಂದ 2008 ರವರೆಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 1996-99 ಮತ್ತು 2008-09ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

ಖರ್ಗೆ 2009 ಮತ್ತು 2014 ರಲ್ಲಿ ಲೋಕಸಭೆಗೆ ಚುನಾಯಿತರಾದರು ಮತ್ತು 2020 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಅವರು ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು. ಖರ್ಗೆ ಕರ್ನಾಟಕದಲ್ಲಿ ಹಲವಾರು ಬಾರಿ ಮುಖ್ಯಮಂತ್ರಿ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿದ್ದರೂ ಈವರೆಗೆ ಆ ಹುದ್ದೆ ಅವರಿಗೆ ದಕ್ಕಿಲ್ಲ. ಆದರೆ ಈ ಬಗ್ಗೆ ಖರ್ಗೆ ಎಂದೂ ಪ್ರತಿಭಟಿಸಲಿಲ್ಲ ಮತ್ತು ಪಕ್ಷದ ಶಿಸ್ತುಬದ್ಧ ಕಾರ್ಯಕರ್ತನಾಗಿ ಕೆಲಸ ಮುಂದುವರೆಸಿದರು. ಕಾಂಗ್ರೆಸ್ ಪಕ್ಷದ ಸುದೀರ್ಘ ಇತಿಹಾಸದಲ್ಲಿ ಖರ್ಗೆ ಪಕ್ಷದ ಎರಡನೇ ದಲಿತ ಅಧ್ಯಕ್ಷರಾಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ.

ಇದನ್ನೂ ಓದಿ: ಖರ್ಗೆಗೆ ಪ್ರಧಾನಿ ಅಭಿನಂದನೆ: ಅಧಿಕಾರಾವಧಿ ಫಲಪ್ರದವಾಗಿರಲಿ ಎಂದ ಮೋದಿ

Last Updated : Oct 26, 2022, 12:47 PM IST

ABOUT THE AUTHOR

...view details