ನವದೆಹಲಿ: ಮದರಸಾಗಳಲ್ಲಿ ವಿಶಾಲ ತಳಹದಿಯ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಮದರಸಾಗಳಲ್ಲಿ ಸರಿಯಾದ ಶಿಕ್ಷಣವನ್ನು ನೀಡಬೇಕು ಹಾಗೂ ಮಕ್ಕಳಿಗೆ ಏಕ ಸಿದ್ಧಾಂತ ಬೋಧನೆಯ ರೀತಿಯ ಶಿಕ್ಷಣ ನೀಡಲೇಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ. ಇದೇ ಸಂದರ್ಭದಲ್ಲಿ, ತಾವು ಒಂದು ಸಮುದಾಯಕ್ಕೆ ಸೇರಿದ್ದು, ಅದು ಭಾರತೀಯ ಸಮುದಾಯ ಎಂದು ಖಾನ್ ತಿಳಿಸಿದ್ದಾರೆ.
ತ್ರಿವಳಿ ತಲಾಖ್ ರದ್ದು ಮಾಡಿದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಮೆಚ್ಚುಗೆ ಪಡೆದಿದ್ದಾರೆ. ತ್ರಿವಳಿ ತಲಾಖ್ ಕಾಯ್ದೆ ರದ್ದತಿಯಿಂದ ಮುಸಲ್ಮಾನ ಸಮುದಾಯದಲ್ಲಿ ತಲಾಖ್ ಪ್ರಕರಣಗಳು ಶೇ 91 ರಷ್ಟು ಕಡಿಮೆಯಾಗಿವೆ ಎಂದರು.
ಖಾಸಗಿ ಸುದ್ದಿ ವಾಹಿನಿಯ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಯ ಒಪ್ಪಿತ ರಾಷ್ಟ್ರವಾಗಿದೆ. ಯಾವುದೇ ಮಗುವಿಗೆ 14 ವರ್ಷದವರೆಗೆ ವಿಶಾಲ ತಳಹದಿಯ ಶಿಕ್ಷಣವನ್ನೇ ನೀಡಬೇಕು ಎಂದು ಮನವಿ ಮಾಡಿದರು.