ಕೊಚ್ಚಿ (ಕೇರಳ): ಕೇರಳದಲ್ಲಿ ರಾಜಭವನ ಮತ್ತು ಎಡಪಂಥೀಯ ಪಕ್ಷದ ಸರ್ಕಾರದ ನಡುವಿನ ಜಗಳ ಮುಂದುವರೆದಿದ್ದು, ರಾಜ್ಯದಲ್ಲಿ ಕೆಲವೇ ಜನರ ಒಂದು ಗುಂಪು ಆಡಳಿತ ನಡೆಸುತ್ತಿದೆ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಿಪಿಐ(ಎಂ) ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಸರ್ಕಾರಿ ನೌಕರಿಗಳಿಗೆ ನೇಮಿಸಿದ್ದು ಇದನ್ನು ಸಮರ್ಥಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪೌರಾಡಳಿತ ಕಚೇರಿಯಲ್ಲಿ ಖಾಲಿಯಿರುವ ತಾತ್ಕಾಲಿಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ತಾವು ನೀಡಿರುವ ಸಿಪಿಐ(ಎಂ) ಕಾರ್ಯಕರ್ತರ ಆದ್ಯತಾ ಪಟ್ಟಿಯನ್ನು ಪರಿಗಣಿಸಬೇಕೆಂದು ತಿರುವನಂತಪುರ ಮೇಯರ್ ಬರೆದಿದ್ದಾರೆಂದು ಆರೋಪಿಸಲಾದ ಪತ್ರವನ್ನು ಉಲ್ಲೇಖಿಸಿ ರಾಜ್ಯಪಾಲರು ಆರೋಪ ಮಾಡಿದ್ದಾರೆ.