ತಿರುವನಂತಪುರಂ: ಕೇರಳದ ಎಡರಂಗ ಸರ್ಕಾರ ಮತ್ತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವಿನ ಉದ್ವಿಗ್ನತೆಯ ನಡುವೆ, ರಾಜ್ಯಪಾಲರು ಸೋಮವಾರ, ಸೆಪ್ಟೆಂಬರ್ 19 ರಂದು ರಾಜಭವನಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿರುವುದು ಅಚ್ಚರಿ ಮೂಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಅವರು ಕೆಲವು ದಾಖಲೆಗಳು ಮತ್ತು ವೀಡಿಯೊ ಕ್ಲಿಪ್ಪಿಂಗ್ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಸೋಮವಾರ ಬೆಳಗ್ಗೆ 11.45ಕ್ಕೆ ತಿರುವನಂತಪುರಂನ ರಾಜಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ ಎಂದು ರಾಜ್ಯಪಾಲರ ಕಚೇರಿ ತಿಳಿಸಿದೆ.
ರಾಜ್ಯದ ವಿಶ್ವವಿದ್ಯಾನಿಲಯಗಳ ವ್ಯವಹಾರಗಳಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಭರವಸೆ ನೀಡಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮಗೆ ಬರೆದ ಪತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಖಾನ್ ಈ ಮುನ್ನ ಹೇಳಿದರು. ಆಧರೆ ಈಗ ಅವರು ಹಸ್ತಕ್ಷೇಪದ ಬದಲು ವಿಶ್ವವಿದ್ಯಾಲಯಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
2019ರ ಡಿಸೆಂಬರ್‌ನಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ಅನ್ನು ಉದ್ಘಾಟಿಸಲು ಹೋದಾಗ ಅವರು ಎದುರಿಸಿದ ಕೆಟ್ಟ ಘಟನೆಗೆ ಸಂಬಂಧಿಸಿದಂತೆ ಕೆಲವು ವೀಡಿಯೊ ತುಣುಕುಗಳನ್ನು ಬಿಡುಗಡೆ ಮಾಡುವುದಾಗಿ ರಾಜ್ಯಪಾಲರು ಹೇಳಿದ್ದಾರೆ.