ಅನಂತಪುರಂ(ಆಂಧ್ರಪ್ರದೇಶ): ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ಸಂಬಂಧಿ ಸಿದ್ದಾರ್ಥ್ ಎಂಬವರನ್ನು ಅಪಹರಿಸಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಆರೋಪಿಯೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿರುವ ಘಟನೆ ತಿರುಪತಿಯಲ್ಲಿ ನಡೆದಿದೆ.
ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಆರೋಪಿ
ತಿರುಪತಿಯ ಕಾರ್ಲಗುಂಟ ನಿವಾಸಿ ಚೆನ್ನಾರೆಡ್ಡಿ ಎಂಬವರ ಮಗ ಶ್ಯಾಂಸುಂದರ್ ರೆಡ್ಡಿ (28) ಎಂಬ ಆರೋಪಿ ಬಿ.ಟೆಕ್ ವ್ಯಾಸಂಗ ಮಾಡಿದ್ದಾನೆ. 2014ರಿಂದ ಉದ್ಯೋಗಕ್ಕಾಗಿ ಚೆನ್ನೈ ಮತ್ತು ಬೆಂಗಳೂರು ಅಲೆಯುತ್ತಿದ್ದನಂತೆ. ಅದೇ ಸಮಯದಲ್ಲಿ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ವಿನೋದ್ ಜೊತೆ ಕೆಲವು ದಿನಗಳ ಕಾಲ ವಾಸವಿದ್ದನು. ವಿನೋದ್ ಸಹ ತಿರುಪತಿಯ ಕಾರ್ಲಗುಂಟ ನಿವಾಸಿಯಾಗಿದ್ದಾನೆ.
ತಿರುಪತಿಗೆ ಬಂದ ಸ್ನೇಹಿತರು
ವಾರದ ಹಿಂದೆ ವಿನೋದ್ ಮತ್ತು ಶ್ಯಾಂಸುಂದರ್ ರೆಡ್ಡಿ ಇಬ್ಬರೂ ತಿರುಪತಿಗೆ ಬಂದಿದ್ದಾರೆ. ಆದ್ರೆ ಕಳೆದ ತಿಂಗಳು 19 ರಿಂದ ಕಾಣೆಯಾಗಿದ್ದ ಸಿದ್ದಾರ್ಥ್ ಹತ್ಯೆಯಾಗಿದ್ದು, ಆ ಕೊಲೆ ಪ್ರಕರಣದಲ್ಲಿ ಇವರ ಕೈವಾಡವಿದೆ ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸರಿಗೆ ಹೆದರಿ ಆತ್ಮಹತ್ಯೆ ನಿರ್ಧಾರ
ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ಬರುತ್ತಾರೆಂದು ಹೆದರಿ ವಿನೋದ್ ಮತ್ತು ಶ್ಯಾಂಸುಂದರ್ ಆತ್ಮಹತ್ಯೆಗೆ ಶರಣಾಗಲು ತೀರ್ಮಾನಿಸಿದ್ದಾರೆ.
ಶರ್ಟ್ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ
ಪೊಲೀಸರಿಗೆ ಹೆದರಿ ಶ್ಯಾಂಸುಂದರ್ ನಾಲ್ಕು ದಿನಗಳ ಹಿಂದೆ ತನ್ನ ಶರ್ಟ್ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಿರುಪತಿ ಶ್ರೀನಿವಾಸಂ ಹಿಂಬದಿಯಿರುವ ತಾಳ್ಲಪಾಕ ಕೆರೆಯ ಬಳಿಯ ಮುಳ್ಳಿನ ಕಂಟಿಯಲ್ಲಿ ಶ್ಯಾಂಸುಂದರ್ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಾಜಿ ಸಿಎಂ ಧರಂಸಿಂಗ್ ಸಂಬಂಧಿ ಕೊಲೆ ಪ್ರಕರಣ: ಓರ್ವ ಆರೋಪಿ ವಶಕ್ಕೆ
ಎಸ್ಐ ಇಮ್ರಾನ್ ಪಾಷಾ ತಂಡ ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ಶ್ಯಾಂಸುಂದರ್ ಪೋಷಕರಿಗೆ ಮಾಹಿತಿ ತಿಳಿಸಲಾಗಿದೆ.
ಪ್ರಕರಣ ದಾಖಲು
ನನ್ನ ಮಗ ಕಳೆದ ತಿಂಗಳು 22ರಂದು ಫೋನ್ ಮಾಡಿ ಆರ್ಥಿಕ ಸಮಸ್ಯೆಯ ಬಗ್ಗೆ ಮಾತನಾಡಿದ್ದ ಎಂದು ಶ್ಯಾಂಸುಂದರ್ ತಂದೆ ಹೇಳಿದ್ದು, ದೂರು ನೀಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿ ಬದುಕಿದ ಆರೋಪಿ
ತಿರುಪತಿ-ರೇಣಿಗುಂಟ ಮಾರ್ಗ ಚಲಿಸುತ್ತಿದ್ದ ರೈಲಿನಡಿ ಬಿದ್ದ ವಿನೋದ್ ಆತ್ಮಹತ್ಯೆಗೆ ಯತ್ನಿಸಿದ್ದ. ಆದ್ರೆ ರೈಲು ವೇಗವಾಗಿರುವುದರಿಂದ ಡಿಕ್ಕಿಯ ರಭಸಕ್ಕೆ ವಿನೋದ್ ಪಕ್ಕಕ್ಕೆ ಬಿದ್ದಿದ್ದಾನೆ. ಈ ಘಟನೆಯಲ್ಲಿ ವಿನೋದ್ ಕೈಗಳು ಮತ್ತು ಕಾಲುಗಳಿಗೆ ಗಾಯವಾಗಿದೆ. ಸ್ಥಳೀಯರ ನೆರವಿನಿಂದ ವಿನೋದ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದ ಪೊಲೀಸರಿಂದ ವಿನೋದ್ ವಿಚಾರಣೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋದ್ನನ್ನು ಕರ್ನಾಟಕದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ನೀಡಿದ ಮಾಹಿತಿ ಮೇರೆಗೆ ಅಮೃತಹಳ್ಳಿ ಠಾಣೆಯ ವಿಶೇಷ ತಂಡ ನೆಲ್ಲೂರಿನ ನಲ್ಲಮಲ್ಲ ಅರಣ್ಯಪ್ರದೇಶದಲ್ಲಿ ಸಿದ್ದಾರ್ಥ್ ಶವ ಪತ್ತೆ ಮಾಡಲು ಸ್ಥಳಕ್ಕೆ ದೌಡಾಯಿಸಿದೆ. ಇಂದು ಸ್ಥಳೀಯ ತಹಶೀಲ್ದಾರ್ ಹಾಗೂ ವೈದ್ಯರ ಅನುಮತಿ ಪಡೆದ ಬಳಿಕ ಹೂಳಿರುವ ಶವ ಹೊರತೆಗೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲವು ಆರೋಪಿಗಳು ಭಾಗಿ
ಕೊಲೆ ಪ್ರಕರಣದಲ್ಲಿ ಹಲವು ಆರೋಪಿಗಳು ಭಾಗಿಯಾಗಿದ್ದು, ಇವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಕೊಲೆ ಹಿಂದೆ ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವೈಷಮ್ಯ ಸೇರಿದಂತೆ ಎಲ್ಲ ರೀತಿಯ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಸಿದ್ದಾರ್ಥ ಕೊಲೆ
ಅಮೆರಿಕದಲ್ಲಿ ವ್ಯಾಸಂಗ ಮಾಡಿದ್ದ 28 ವರ್ಷದ ಸಿದ್ದಾರ್ಥ್ ಅಮೃತಹಳ್ಳಿಯ ದಾಸರಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು. ಜ.19 ರಂದು ತಂದೆ ದೇವೇಂದರ್ ಸಿಂಗ್ ಕೊನೆಯ ಬಾರಿ ಮಾಡಿದ ಮೆಸೇಜ್ನಲ್ಲಿ ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಕ್ಕೆ ಹೋಗುತ್ತಿರುವುದಾಗಿ ವಾಟ್ಸ್ಆ್ಯಪ್ ಮಾಡಿದ್ದರು. ಅನಂತರ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಎರಡು ಮೂರು ದಿನಗಳ ಕಳೆದರೂ ಮಗ ಅಮೆರಿಕಕ್ಕೆ ಹೋಗದೆ, ಮನೆಗೂ ಬಾರದೇ ನಾಪತ್ತೆಯಾಗಿರುವುದನ್ನು ಕಂಡ ಪೋಷಕರು ಆತಂಕಗೊಂಡು ಜ.25ರಂದು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಕೊಲೆ ಯಾವ ಕಾರಣಕ್ಕಾಗಿ ಮಾಡಿದ್ದಾರೆ, ವಶಕ್ಕೆ ಪಡೆದುಕೊಂಡ ಆರೋಪಿ ಪಾತ್ರ ಹಾಗೂ ಯಾವ ರೀತಿಯಲ್ಲಿ ಸಿದ್ದಾರ್ಥ್ ನನ್ನು ಹತ್ಯೆಗೈಯಲಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.