ರಾಂಚಿ(ಜಾರ್ಖಂಡ್):ಭಾರತದ ಮೇಲೆ ಮೊಘಲರು ದಾಳಿ ಮಾಡಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ಸಂಪತ್ತು ಕೊಳ್ಳೆ ಹೊಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆ ಸಂದರ್ಭದಲ್ಲಿ 1268 ಕೆಜಿ ಚಿನ್ನದ ಶ್ರೀಕೃಷ್ಣನ ಪ್ರತಿಮೆ ಲೂಟಿಯಾಗಿದ್ದು ಅದನ್ನು ರಕ್ಷಣೆ ಮಾಡಿದ್ದು ಮಾತ್ರ ಮೊಘಲ ರಾಜ ಔರಂಗಜೇಬನ ಮಗಳು ಎಂಬುದು ಗಮನಾರ್ಹ ವಿಚಾರ. ಸದ್ಯ ಆ ಪ್ರತಿಮೆ ಎಲ್ಲಿದೆ ಎಂಬುದರ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
1280 ಕೆಜಿ ಚಿನ್ನ ಬಳಸಿ ನಿರ್ಮಿಸಲಾಗಿರುವ ಶ್ರೀಕೃಷ್ಣನ ವಿಗ್ರಹ ಜಾರ್ಖಂಡ್‌ನ ನಕ್ಸಲ್‌ಪೀಡಿತ ಪ್ರದೇಶದಲ್ಲಿದೆ. ರಾಂಚಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ಗರ್ವಾದಲ್ಲಿ ಈ ವಿಶಿಷ್ಠ ದೇವಾಲಯವಿದೆ. ಇದನ್ನು ಬನ್ಶಿಧರ್ ನಗರ ಎಂದೂ ಕರೆಯಲಾಗುತ್ತದೆ.
ಬನ್ಶಿಧರ್ ನಗರವನ್ನು ಯೋಗೇಶ್ವರ್ ಭೂಮಿ ಹಾಗೂ ಇನ್ನೊಂದು ಮಥುರಾ ವೃಂದಾವನ ಎಂದು ಕರೆಯುತ್ತಾರೆ. ಬನ್ಶಿಧರ್ ದೇವಸ್ಥಾನದಲ್ಲಿ ಸ್ಥಾಪಿಸಲಾಗಿರುವ ಶ್ರೀಕೃಷ್ಣನ ಪ್ರತಿಮೆಯು ಸುಮಾರು 2500 ಕೋಟಿ ರೂ ಮೌಲ್ಯ ಅಂದರೆ 1280 ಕೆ.ಜಿ ತೂಕದ ಚಿನ್ನದಿಂದ ಮಾಡಲಾಗಿದೆ.
ದೇವಾಲಯದ ಅರ್ಚಕರು ಹೇಳುವಂತೆ, ಮಹಾರಾಜ್ ಭವಾನಿ ಸಿಂಗ್ ಅವರ ರಾಣಿ ಶಿವಮಣಿ ಅವರಿಗೆ ಶಿವಪಹಾರಿ ಬೆಟ್ಟದಲ್ಲಿ ಶ್ರೀಕೃಷ್ಣನ ಸಮಾಧಿ ಮಾಡಿರುವ ಕನಸು ಕಂಡಿದ್ದರಂತೆ. ಮರುದಿನ ಸೈನ್ಯದೊಂದಿಗೆ ಅಲ್ಲಿಗೆ ಹೋಗಿ ಅಗೆದು ನೋಡಿದಾಗ ಶ್ರೀಕೃಷ್ಣನ ವಿಗ್ರಹ ಪತ್ತೆಯಾಗಿದೆ. ಆನೆಯ ಮೇಲೆ ಕೃಷ್ಣನ ಪ್ರತಿಮೆ ಇಟ್ಟುಕೊಂಡು ಕೋಟೆಗೆ ತರಲಾಗಿತ್ತು. ಆದರೆ, ಮುಖ್ಯದ್ವಾರದ ಮುಂದೆ ಆನೆ ಕುಳಿತು ಬಿಟ್ಟಿದೆ. ಹತ್ತಾರು ಸಲ ಪ್ರಯತ್ನ ಮಾಡಿದ್ರೂ ಅದು ಒಳಗಡೆ ಹೋಗಿಲ್ಲ. ಹೀಗಾಗಿ, ಅದೇ ಸ್ಥಳದಲ್ಲಿ ದೇವಾಲಯ ನಿರ್ಮಿಸಲಾಗಿದೆ. ರಾಜಮಾತೆ ಶಿವಮಣಿ ಕುನಾರ್ ಶ್ರೀಕೃಷ್ಣನ ಮಹಾನ್ ಭಕ್ತೆ ಎಂಬುದು ಗಮನಾರ್ಹ ವಿಚಾರ.
ದೇವಸ್ಥಾನದಲ್ಲಿ ಕಳ್ಳತನ: 1930ರ ಸುಮಾರಿಗೆ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಶ್ರೀಕೃಷ್ಣನ ಕೊಳಲು ಹಾಗೂ ಛತ್ರಿ ಕದ್ದು ಸಮೀಪದ ನದಿಯಲ್ಲಿ ಬಚ್ಚಿಡಲಾಗಿತ್ತು. ಈ ವೇಳೆ ಕಳ್ಳತನ ಮಾಡಿದವರು ಕುರುಡಾಗಿದ್ದರಂತೆ. ತದನಂತರ ತಮ್ಮ ಅಪರಾಧ ಒಪ್ಪಿಕೊಂಡಿದ್ದಾರೆ. ಆದರೆ, ನದಿಯಲ್ಲಿ ಬಚ್ಚಿಟ್ಟಿದ್ದ ಕೊಳಲು ಮತ್ತು ಛತ್ರಿ ಪತ್ತೆಯಾಗಿರಲಿಲ್ಲ. ಹೀಗಾಗಿ, ರಾಜಮನೆತನ ಹೊಸದಾಗಿ ಚಿನ್ನದ ಕೊಳಲು ಹಾಗೂ ಛತ್ರಿ ತಯಾರಿಸಿ ದೇವಸ್ಥಾನಕ್ಕೆ ನೀಡಿದ್ದರು.