ನವದೆಹಲಿ: ಪಂಜಾಬ್‌ನ ಫಿರೋಜ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆಯಲ್ಲಿ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ - ಪ್ರತಿಪಕ್ಷಗಳ ನಡುವಿನ ವಾಕ್ಸಮರದ ಬೆನ್ನಲ್ಲೇ ಜಾರ್ಖಂಡ್‌ನ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿಗೆ ಭಾರತದಲ್ಲಿ ಭಯದ ಭಾವನೆ ಇದ್ದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಶಾಸಕ ಇರ್ಫಾನ್ ಅನ್ಸಾರಿ ಟೀಕಿಸಿದ್ದಾರೆ.
ಪ್ರಧಾನಿ ಅವರ ರ‍್ಯಾಲಿಗೆ ವ್ಯವಸ್ಥೆ ಮಾಡಲಾಗಿತ್ತು. ಸ್ವಇಚ್ಛೆಯಿಂದ ಅವರು ಪಂಜಾಬ್‌ಗೆ ಹೋಗಿದ್ದರು. ಆದರೆ ಕಾರ್ಯಕ್ರಮಕ್ಕೆ ಕಡಿಮೆ ಜನ ಬಂದಿದ್ದರಿಂದ ಪ್ರಧಾನಿ ಮೋದಿ ವಾಪಸ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಭಯವಿದ್ದರೆ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋಗಲಿ. ಪಾಕಿಸ್ತಾನದಲ್ಲಿ ಸುರಕ್ಷಿತವಾಗಿರಲು ಸಾಧ್ಯವಾಗುತ್ತೆ. ಪಾಕಿಸ್ತಾನಕ್ಕೆ ಹೋಗಲು ನಾನು ಅವರಿಗೆ ಟಿಕೆಟ್ ಕೊಡಿಸುತ್ತೇನೆ. ಬಿಜೆಪಿಯ ಎಲ್ಲರಿಗೂ ಇದೇ ಆಫರ್ ಕೊಡ್ತೇನೆ ಎಂದು ಅನ್ಸಾರಿ ವಿವಾದದ ಕಿಚ್ಚು ಹಚ್ಚಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ಮೋದಿಯವರ ಚುನಾವಣಾ ಪೂರ್ವಸಿದ್ಧತೆಯನ್ನು ಗಮಿನಿಸಿದ್ದೇನೆ. ಎರಡೂ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಅಲ್ಲಿನ ಜನರ ಭಾವನೆಗಳಿಗೆ ಅಗೌರವ ತೋರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇದು ಭಾರಿ ರಾದ್ಧಾಂತಕ್ಕೆ ಕಾರಣವಾಗಿತ್ತು. ಇದೀಗ ಪಂಜಾಬ್‌ನಲ್ಲಿ ಮರುಕಳಿಸಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮಯದಲ್ಲಿ 'ದೀದಿ ಓ ದೀದಿ' ಘೋಷಣೆ ಕೂಗಿ ಅಲ್ಲಿನ ಜನರನ್ನು ಅವಮಾನಿಸಿದ್ದರು. ಈಗ ನಮ್ಮ ಪಂಜಾಬಿ ಸಹೋದರರಿಗೆ ಇದೇ ರೀತಿ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:Modi Security Breach: ಬ್ಲೂ ಬುಕ್ ಪಾಲಿಸಿಲ್ಲ ಎಂದ ಅಧಿಕಾರಿ.. ಕಾರ್ಯಕರ್ತರಿಗೆ ಥಳಿಸಿ, ಊಟದ ಬಾಕ್ಸ್ ಕಸಿದರು ಎಂದ ಸಂಸದೆ