ನವದೆಹಲಿ:ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದೇಶದ ವಿವಿಧ ಪಕ್ಷದ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿದ್ದು, ದಿಢೀರ್ ಶಾಕ್ ನೀಡಿದ್ದಾರೆ. ಕರ್ನಾಟಕದ ಮಣಿಪಾಲ್ ಗ್ರೂಪ್ನ ಫೈನಾನ್ಸ್ ಕಚೇರಿಗಳ ಮೇಲೂ ದಾಳಿ ನಡೆದಿದೆ.
ಮುಖ್ಯವಾಗಿ ಗುಜರಾತ್, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ಛತ್ತೀಸ್ಗಢ, ಕರ್ನಾಟಕ ಸೇರಿದಂತೆ ಆರಕ್ಕೂ ಹೆಚ್ಚು ರಾಜ್ಯಗಳ ಮೇಲೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬೋಗಸ್ ದೇಣಿಗೆ, ಮಧ್ಯಾಹ್ನದ ಬಿಸಿಯೂಟದಲ್ಲಿ ಅಕ್ರಮ ಹಾಗೂ ತೆರಿಗೆ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ದಾಖಲೆಗಳನ್ನು ಜಾಲಾಡುತ್ತಿದ್ದಾರೆ. ಮುಖ್ಯವಾಗಿ, 87 ರಾಜಕೀಯ ಮುಖಂಡರುಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ ಎನ್ನಲಾಗ್ತಿದೆ.
ಇದನ್ನೂ ಓದಿ:ಬೆಂಗಳೂರು: ಮಣಿಪಾಲ್ ಸಮೂಹ ಸಂಸ್ಥೆಗಳ ಮೇಲೆ ಐಟಿ ದಾಳಿ
ಅಕ್ರಮ ಹಣ ವರ್ಗಾವಣೆ, ರಾಜಕೀಯ ನಿಧಿ ಹಾಗೂ ಅಬಕಾರಿ ಹಗರಣದಲ್ಲಿ ದೊಡ್ಡ ಮಟ್ಟದ ತೆರಿಗೆ ವಂಚನೆ ಕೇಳಿ ಬಂದಿದ್ದು, ಅಂತಹ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆದಿದೆ. ರಾಜಸ್ಥಾನದ ಸಚಿವ ರಾಜೇಂದ್ರ ಯಾದವ್ ಮತ್ತು ಅವರ ಆಪ್ತರ ನಿವಾಸದ ಮೇಲೂ ಐಟಿ ಕಣ್ಣಿಟ್ಟಿದೆ. ಛತ್ತೀಸ್ಗಢದಲ್ಲಿ ಮದ್ಯದ ವ್ಯಾಪಾರಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ಮಣಿಪಾಲ್ ಗ್ರೂಪ್ ಕಚೇರಿ ಮೇಲೆ ತೆರಿಗೆ ಅಧಿಕಾರಿಗಳು ರೈಡ್ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಗೋಪಾಲ್ ರಾಯ್ ಅವರ ಲಖನೌ ನಿವಾಸ ಹಾಗೂ ಕಚೇರಿಗಳಲ್ಲಿ ಪರಿಶೀಲನೆ ನಡೆಯುತ್ತಿದೆ.
ಮಮತಾ ಬ್ಯಾನರ್ಜಿ ಸಂಪುಟದ ಕಾನೂನು ಸಚಿವ ಮಲ್ಯ ಘಟಕ್ ಅವರ ನಿವಾಸ ಹಾಗೂ ವಿವಿಧ ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿ, ಶೋಧ ಕಾರ್ಯ ಮುಂದುವರೆಸಿದ್ದಾರೆ.