ಕೊಚ್ಚಿ(ಕೇರಳ):ಭಾರತದ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ 1 (ಐಎಸಿ-1) ಅಥವಾ ಐಎನ್ಎಸ್ ವಿಕ್ರಾಂತ್ ಅರಬ್ಬಿ ಸಮುದ್ರದಲ್ಲಿ ತನ್ನ ಚೊಚ್ಚಲ ಪರೀಕ್ಷಾರ್ಥ ಸಂಚಾರವನ್ನು ಬುಧವಾರ ಆರಂಭಿಸಿದೆ. ಈ ಪ್ರಯೋಗ ನಾಲ್ಕು ದಿನಗಳ ಕಾಲ ಮುಂದುವರೆಯಲಿದೆ.
ಭಾರತೀಯ ನೌಕಾಪಡೆಯ ನೌಕಾ ವಿನ್ಯಾಸ ನಿರ್ದೇಶನಾಲಯ (ಡಿಎನ್ಡಿ) ಐಎನ್ಎಸ್ ವಿಕ್ರಾಂತ್ ಅನ್ನು ವಿನ್ಯಾಸಗೊಳಿಸಿದ್ದು, ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ನಿರ್ಮಾಣಗೊಂಡಿದೆ. ಈ ವಿಮಾನ ವಾಹಕ ನೌಕೆ ಭಾರತದ ಮೊದಲ ಸ್ವದೇಶಿ ನಿರ್ಮಾಣದ ಪ್ರಯತ್ನವಾಗಿದೆ.
ವಿಕ್ರಾಂತ್ ಭಾರತ ಸರ್ಕಾರದ ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳ ಭಾಗವಾಗಿದೆ. ಈ ಕಾರಣದಿಂದಾಗಿ ಈ ನೌಕೆಯ ನಿರ್ಮಾಣಕ್ಕೆ ಬಳಸಲಾಗಿರುವ ಶೇಕಡಾ 76ರಷ್ಟು ಸಾಧನ, ಸಲಕರಣೆಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಲಾಗಿದೆ ಎಂದು ನೌಕಾಪಡೆ ಹೇಳಿದೆ. ಈ ಮೂಲಕ ಸ್ವತಂತ್ರವಾಗಿ ವಿಮಾನವಾಹಕ ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದೆ.
ವಿಕ್ರಾಂತ್ ನೌಕೆ ಹೇಗಿದೆ?
ವಿಕ್ರಾಂತ್ ನೌಕೆಯು 262 ಮೀಟರ್ ಉದ್ದ, 62 ಮೀಟರ್ ಅಗಲ ಇದ್ದು, 59 ಮೀಟರ್ ಎತ್ತರ ಹೊಂದಿದೆ. ಸೂಪರ್‌ಸ್ಟ್ರಕ್ಚರ್ (ನೌಕೆಯ ಮೇಲ್ಭಾಗ)ದಲ್ಲಿ ಐದು ಡೆಕ್ಗಳು ಸೇರಿದಂತೆ ಒಟ್ಟು 14 ಡೆಕ್‌ಗಳಿವೆ. 2,300ಕ್ಕೂ ಹೆಚ್ಚು ವಿಭಾಗಗಳಿದ್ದು, ಸುಮಾರು 1,700 ಜನರ ಸಿಬ್ಬಂದಿಗಾಗಿ ವಿಕ್ರಾಂತ್ ವಿನ್ಯಾಸಗೊಂಡಿದೆ. ಮಹಿಳಾ ಅಧಿಕಾರಿಗಳಿಗೂ ವಿಶೇಷ ಕ್ಯಾಬಿನ್ ವ್ಯವಸ್ಥೆಯಿದೆ.
ವಿಕ್ರಾಂತ್ ನೌಕೆ ಗಂಟೆಗೆ 28 ನಾಟ್ (knot) ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. (ಅಂದರೆ ಸರಿಸುಮಾರು ಒಂದು ಗಂಟೆಗೆ 51.86 ಕಿಲೋಮೀಟರ್). ಗಂಟೆಗೆ 18 ನಾಟ್ ವೇಗದಲ್ಲಿ (33.34 ಕಿಲೋಮೀಟರ್) ಸುಮಾರು 7,500 ನಾಟಿಕಲ್ ಮೈಲು (Nautical Miles)ಗಳನ್ನು (ಸುಮಾರು 13,890 ಕಿಲೋಮೀಟರ್) ತಲುಪುವ ಸಾಮರ್ಥ್ಯ ವಿಕ್ರಾಂತ್ಗಿದೆ.
ವಿಕ್ರಾಂತ್ನ ವಿನ್ಯಾಸದ ಕೆಲಸವು 1999ರಲ್ಲಿ ಆರಂಭವಾಯಿತು. ಫೆಬ್ರವರಿ 2009ರಲ್ಲಿ ಕೀಲ್ ಅನ್ನು (ಹಡಗಿನ ತಳಭಾಗ) ಹಾಕಲಾಯಿತು. ಮೊದಲಿಗೆ ಡಿಸೆಂಬರ್ 29, 2011ರಲ್ಲಿ ವಿಕ್ರಾಂತ್ ಅನ್ನು ನೀರಿನ ಮೇಲೆ ತೇಲಿಸಲಾಯಿತು.
ವಿಕ್ರಾಂತ್ ಕುರಿತಂತೆ ಟ್ವೀಟ್ ಮಾಡಿರುವ ಭಾರತೀಯ ನೌಕಾಪಡೆಯ ವಕ್ತಾರರು ದೇಶಕ್ಕೆ ಇದು ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣ ಎಂದಿದ್ದು, ಭಾರತದಲ್ಲಿಯೇ ನಿರ್ಮಾಣವಾದ ಅತ್ಯಂತ ದೊಡ್ಡ ಮತ್ತು ಸಂಕೀರ್ಣವಾದ ವಿಮಾನವಾಹಕ ನೌಕೆ ಇದಾಗಿದೆ ಎಂದು ಬಣ್ಣಿಸಿದ್ದಾರೆ.
ವಿಕ್ರಾಂತ್ ನೌಕೆಯನ್ನು ಉನ್ನತ ಮಟ್ಟದ ಮೆಕ್ಯಾನಿಸಂ ಮೂಲಕ ವಿನ್ಯಾಸಗೊಳಿಸಲಾಗಿದೆ. ಈ ಪ್ರಯೋಗ ನಡೆಸಲಾಗುತ್ತಿದ್ದು, ಈ ವೇಳೆ ವಿಕ್ರಾಂತ್ನ ಕಾರ್ಯಕ್ಷಮತೆ ಮತ್ತು ವಿವಿಧ ಭಾಗಗಳ ಕಾರ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಎಂದು ಟ್ವಿಟ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.