ನವದೆಹಲಿ :ದೇಶದಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ ಸರ್ಕಾರ ನೀಡಿರುವ ದಾಖಲೆಗಿಂತ ಹತ್ತು ಪಟ್ಟು ಹೆಚ್ಚಿದೆ ಎಂಬ ಆಘಾತಕಾರಿ ವರದಿಯೊಂದು ಬಹಿರಂಗವಾಗಿದೆ. ಆಧುನಿಕ ಭಾರತದಲ್ಲಿ ಈ ಸಾವು ಅತ್ಯಂತ ದೊಡ್ಡ ದುರಂತ ಎನ್ನಲಾಗಿದೆ. ದಕ್ಷಿಣ ಏಷ್ಯಾದ ರಾಷ್ಟ್ರ ಭಾರತದಲ್ಲಿ ವಿನಾಶಕಾರಿ ವೈರಸ್ ವ್ಯಾಪಕವಾಗಿದೆ ಎಂದು ಸಂಶೋಧನೆ ಹೇಳಿದೆ.
ಭಾರತದಲ್ಲಿ 4,14,000 ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಆದರೆ, ಸರ್ಕಾರ ಸರಿಯಾದ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಲಾಗಿದೆ. ಇಂದು ಬಿಡುಗಡೆಯಾದ ವರದಿ ಪ್ರಕಾರ, 2020ರ ಜನವರಿಯಿಂದ 2021ರ ಜೂನ್‌ವರೆಗೆ ದಾಖಲಾಗಿರುವ ಮೃತರ ಸಂಖ್ಯೆ ಹಾಗೂ ಅಂದಾಜಿಸಲಾಗಿರುವ ಸಂಖ್ಯೆಗೆ 30 ಲಕ್ಷದಿಂದ 40 ಲಕ್ಷದ 70 ಸಾವಿರ ಅಂತರವಿದೆ. ನಿಖರವಾದ ಸಾವಿನ ಸಂಖ್ಯೆ ಅಧಿಕೃತವಾಗಿ ಘೋಷಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಬಹುದು ಎಂದು ಹೇಳಿದೆ.
ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಇತರ ಇಬ್ಬರು ಸಂಶೋಧಕರು ಈ ವರದಿಯನ್ನು ಪ್ರಕಟಿಸಿದ್ದಾರೆ. ಆಸ್ಪತ್ರೆಗಳಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿರುವುದರಿಂದ ಮೃತರ ಸಂಖ್ಯೆಯಲ್ಲಿ ತಪ್ಪಿರಬಹುದು. ವಿಶೇಷವಾಗಿ ಈ ವರ್ಷದ ಆರಂಭದಲ್ಲಿ ಕೋವಿಡ್‌ನಿಂದ ಗರಿಷ್ಠ ಸಾವು ಉಲ್ಬಣವಾಗಿದೆ ಎಂದು ಹೇಳಿದೆ.
ನಿಜವಾದ ಸಾವುಗಳು ನೂರಾರು ಅಲ್ಲ ಲಕ್ಷಾಂತರ ಸಂಖ್ಯೆಯಲ್ಲಿರಬಹುದು. ವಿಭಜನೆ ಮತ್ತು ಸ್ವಾತಂತ್ರ್ಯದ ನಂತರದ ಭಾರತದಲ್ಲಿ ನಡೆದಿರುವ ಅತ್ಯಂತ ಭೀಕರ ಮಾನವ ದುರಂತವಾಗಿದೆ ಎಂದು ವರದಿಯಲ್ಲಿ ಹೇಳಿದೆ. 1947ರಲ್ಲಿ ಬ್ರಿಟಿಷ್ ಆಳ್ವಿಕೆ ವೇಳೆ ಭಾರತೀಯ ಉಪಖಂಡವನ್ನು ಸ್ವತಂತ್ರ ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸುವ ವೇಳೆ ಹಿಂದೂಗಳು ಮತ್ತು ಮುಸ್ಲಿಮರ ಗುಂಪುಗಳ ಪರಸ್ಪರ ಹೊಡೆದಾಟದಲ್ಲಿ 10 ಲಕ್ಷ ಮಂದಿಯನ್ನು ಹತ್ಯೆ ಮಾಡಲಾಗಿತ್ತು.